ಬೆಂಗಳೂರು: ಕಳೆದ ವರ್ಷದ 1.08 ಕೋಟಿ ಸದಸ್ಯರ ನೋಂದಣಿಯ ದಾಖಲೆ ಮೀರುವ ಮಹತ್ವಾಕಾಂಕ್ಷೆಯೊಂದಿಗೆ ಬಿಜೆಪಿಯ ರಾಜ್ಯ ಘಟಕವು ತನ್ನ ಸದಸ್ಯತ್ವ ಅಭಿಯಾನವನ್ನು ಬುಧವಾರ ಪ್ರಾರಂಭಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿ ಬೂತ್‌ಗೆ ಕನಿಷ್ಠ 400 ಹೊಸ ಸದಸ್ಯರನ್ನು ನೇಮಕ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು. ನಾವು ಸಮಾಜದ ವಿವಿಧ ವರ್ಗಗಳ ಜನರನ್ನು ತಲುಪುತ್ತೇವೆ ಮತ್ತು ಅವರನ್ನು ಬಿಜೆಪಿ ತೆಕ್ಕೆಗೆ ತರುತ್ತೇವೆ. ಈ ಚಾಲನೆಯು ನಮ್ಮ ಹಿಂದಿನ ದಾಖಲೆಯನ್ನು ಮೀರಿಸುತ್ತೇವೆ, ಇದ ಜೊತೆಗೆ ಮಾಜಿ ಪ್ರಧಾನಿ ಎಬಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತದೆ. 2047ನೇ ಇಸವಿಗೆ ಭಾರತವನ್ನು ವಿಕಸಿತ ರಾಷ್ಟ್ರವಾಗಿ, ಅಭಿವೃದ್ಧಿ ಹೊಂದಿದ ದೇಶವಾಗಿ ಮಾಡುವ ಕನಸು ಮಾನ್ಯ ಪ್ರಧಾನಿಯವರದು. ಮೋದಿಜೀ ಅವರಿಗೆ ಇನ್ನೂ ಹೆಚ್ಚು ಬಲ ಕೊಡುವ ಕೆಲಸ ನಡೆಸಬೇಕಿದೆ ಅಭಿಯಾನದ ಯಶಸ್ವಿಗಾಗಿ ಪ್ರತಿ ಬೂತ್‌ಗಳಲ್ಲಿ ಕಾರ್ಯಕರ್ತರನ್ನು ನೇಮಿಸಲಾಗಿದೆ ಎಂದು ಹೇಳಿದರು.
ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಅವರಂತಹ ಹಿರಿಯ ನಾಯಕರ ಉಪಸ್ಥಿತಿಯಿಲ್ಲದೆ ಕಾಂಗ್ರೆಸ್ ನಾಯಕರು ಜಮೀನು ಪ್ರಕರಣದಲ್ಲಿ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರ ಅನುಮತಿ ಕೇಳಿದ್ದು ಏಕೆ ಎಂದು ಪ್ರಶ್ನಿಸಿದರು. ಮುಡಾ ಆಯುಕ್ತರನ್ನು ಅಮಾನತುಗೊಳಿಸಿರುವುದು ನಿವೇಶನ ಹಂಚಿಕೆಗೆ ಸಂಬಂಧಿಸಿದ ಅಕ್ರಮಗಳಲ್ಲಿ ಸಿದ್ದರಾಮಯ್ಯನವರ ಕೈವಾಡವನ್ನು ಸೂಚಿಸುತ್ತದೆ ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದರು. ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ವಿಜಯೇಂದ್ರ ಅವರು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚನ್ನಪಟ್ಟಣ, ಶಿಗ್ಗಾಂವ್ ಮತ್ತು ಸಂಡೂರು ಉಪಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಿರವುದಾಗಿ ತಿಳಿಸಿದರು. ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. "ನಾವು ಕರ್ನಾಟಕದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕೇಂದ್ರ ನಾಯಕರಿಗೆ ಕಳುಹಿಸುತ್ತೇವೆ, ಅವರು ಪರಶೀಲಿಸಿ ಅಂತಿಮಗೊಳಿಸುತ್ತಾರೆ ಎಂದರು.
Advertisement