ಬೆಂಗಳೂರು: ನಮ್ಮ ಮೆಟ್ರೊದ ನೇರಳೆ ಮಾರ್ಗ ನಾಗವಾರ ಅಂಡರ್ ಗ್ರೌಂಡ್ ಕೊನೆಯ ನಿಲ್ದಾಣವಾಗಿದ್ದು, ಬೆಂಗಳೂರು ಮೆಟ್ರೋದ ಹಂತ-1 ಮತ್ತು II ರ 66 ಮೆಟ್ರೋ ನಿಲ್ದಾಣಗಳಲ್ಲಿ ಪ್ರಮುಖವಾಗಿದೆ. ನಿಲ್ದಾಣದ ಅರ್ಧಭಾಗ ಅಂಡರ್ ಗ್ರೌಂಡ್ ಮತ್ತು ಉಳಿದರ್ಧ ಭಾಗ ಗ್ರೌಂಡ್ ಲೆವೆಲ್ ನಲ್ಲಿ ಇದ್ದು, ನಿಲ್ದಾಣದ ಕಾಮಗಾರಿ ಈಗಾಗಲೇ ನಡೆಯುತ್ತಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೊದ ನೇರಳೆ ಮಾರ್ಗ, ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ 21.26 ಕಿಲೋಮೀಟರ್‌ಗಳವರೆಗೆ ಸಾಗುತ್ತಿದ್ದು, ಅದರ ಅಂಡರ್ ಗ್ರೌಂಡ್ ಒಂದೇ 13.76 ಕಿಮೀಗಳನ್ನು ಒಳಗೊಂಡಿದ್ದು, ಡೈರಿ ಸರ್ಕಲ್‌ನಿಂದ ನಾಗವಾರದವರೆಗೆ ಸಾಗುತ್ತದೆ.
ನಿಲ್ದಾಣದ ಕಾನ್ಕೋರ್ಸ್ ಮಟ್ಟವು (ಪ್ರಯಾಣಿಕರಿಗೆ ಟಿಕೆಟ್ ನೀಡುವ ಸ್ಥಳ) ಗ್ರೌಂಡ್ ಲೆವೆಲಲ್ಲಿ ಇರುತ್ತದೆ. ಇಲ್ಲಿಯವರೆಗೆ ನಮ್ಮ ಎಲ್ಲಾ ಅಂಡರ್ ಗ್ರೌಂಡ್ ನಿಲ್ದಾಣಗಳಲ್ಲಿ, ಕಾನ್ಕೋರ್ಸ್ ಸ್ಥಳವು ತಳಮಟ್ಟದಿಂದ ಕೆಳಗಿದೆ ಎಂದು ಅಧಿಕಾರಿಯೊಬ್ಬರು TNIE ಗೆ ತಿಳಿಸಿದರು.
ನಾಗವಾರ ಒನ್ ಎಂದು ಕರೆಯಲ್ಪಡುವ ಅಂಡರ್ ಗ್ರೌಂಡ್ ನಿಲ್ದಾಣವು ಹೊರವರ್ತುಲ ರಸ್ತೆಯಲ್ಲಿರುವ ಏರ್‌ಪೋರ್ಟ್ ಲೈನ್‌ನ ಎಲೆವೇಟೆಡ್ ನಾಗವಾರ ನಿಲ್ದಾಣವನ್ನು ನೇರವಾಗಿ ಸಂಪರ್ಕಿಸುತ್ತದೆ. ಅಂಡರ್ ಗ್ರೌಂಡ್ ನಿಲ್ದಾಣದಲ್ಲಿರುವ ರೈಲು ಹಳಿಗಳು ಮತ್ತು ಎಲೆವೇಟೆಡ್ ರೈಲು ಹಳಿಗಳು ಸುಮಾರು 30 ಮೀಟರ್‌ಗಳಷ್ಟು ಲಂಬವಾಗಿ ಬೇರ್ಪಟ್ಟಿವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿನ ರೈಲು ಹಳಿಗಳನ್ನು ಕೇವಲ 10 ಮೀಟರ್‌ಗಳಷ್ಟು ಪ್ರತ್ಯೇಕಿಸಲಾಗಿದ್ದು, ಮೂರು ಪಟ್ಟು ಎತ್ತರವಾಗಿದೆ ಎಂದರು.
ನಿಲ್ದಾಣ ಈ ರೀತಿ ನಿರ್ಮಿಸಲು ಕಾರಣಗಳು ಎರಡು. ನಾಗವಾರದ ಆಚೆಗೆ ಮೆಟ್ರೋ ಮಾರ್ಗವನ್ನು ವಿಸ್ತರಿಸಲು ಭವಿಷ್ಯದಲ್ಲಿ ಯೋಜನೆ ರೂಪಿಸಿದರೆ ಅದನ್ನು ಸುಲಭವಾಗಿ ಮಾಡಬಹುದು. ಇದಲ್ಲದೆ, ನಿಲ್ದಾಣದ ಉತ್ತರ ತುದಿಯಲ್ಲಿ ರಾಜಕಾಲುವೆ ಇದೆ, ಸಂಪೂರ್ಣವಾಗಿ ಅಂಡರ್ ಗ್ರೌಂಡ್ ಮಾಡಬೇಕಾದರೆ ರಾಜಕಾಲುವೆಯಿಂದ 5 ಮೀಟರ್ ಕೆಳಗೆ ಮಾಡಬೇಕಾಗಿತ್ತು ಎನ್ನುತ್ತಾರೆ.
ನಾಗವಾರ ಒನ್ ನಿಲ್ದಾಣದಿಂದ ಮೇಲೆ ನಾಲ್ಕು ಮಹಡಿಗಳನ್ನು ಈ ನಿಲ್ದಾಣ ಹೊಂದಿರುತ್ತದೆ. 27 ಸಾವಿರ ಚದರ ಮೀಟರ್ ಇರುವ ಈ ಸಂಪೂರ್ಣ ಪ್ರದೇಶವನ್ನು ಸಂಪೂರ್ಣವಾಗಿ ಆಸ್ತಿ ಅಭಿವೃದ್ಧಿಗೆ ಮೀಸಲಿಡಲಾಗುತ್ತಿದೆ ಎಂದರು.
Advertisement