
ಬೆಂಗಳೂರು: ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.
ಮೊದಲ ಹಂತದ ಎತ್ತಿನಹೊಳೆ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ, ಮೊದಲ ಹಂತ ಇಂದು ಉದ್ಘಾಟನೆಯಾಗಿದೆ. ಎರಡನೇ ಹಂತ ಕೂಡ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳಿಗೆ ಯೋಜನೆಯ ಅನುಕೂಲ ತಲುಪಲಿದೆ. 7 ಜಿಲ್ಲೆಗಳ ಜನತೆಯ ಮನೆಗೆ ಕುಡಿಯುವ ನೀರು ತಲುಪುತ್ತದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆ ಎಂದರು.
ಕೆಲವರು ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಾರೆ ಎಂದು ವಿಪಕ್ಷಗಳ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಅಂತಹ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ಕಣ್ಣೆದುರಿಗೆ ಇರುವುದನ್ನು ನಂಬಿ ಎಂದು ಜನರಿಗೆ ತಿಳಿಸಿದರು.
2014ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದ ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಒದಗಿಸುತ್ತೇವೆ. ಕೆರೆಗಳನ್ನು ತುಂಬಿಸುತ್ತೇವೆ. ಕುಡಿಯುವ ನೀರಿನ ವಿಚಾರದಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ಕೊಡಬಾರದು ಎಂಬ ಸೂಚನೆ ನೀಡಿರುವುದಾಗಿ ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಕುಡಿಯುವ ನೀರು ಮತ್ತು ಕೆರೆ ತುಂಬಿಸುವ ಈ ಯೋಜನೆಯಿಂದ ಲಕ್ಷಾಂತರ ಜನರ ಬದುಕು ಬದಲಾಗುವ ನಿರೀಕ್ಷೆಯಿದೆ ಎಂದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಸರ್ಕಾರದ ತಪಸ್ಸು, ಪ್ರತಿಜ್ಞೆ, ಸಂಕಲ್ಪದಿಂದ ಇಂದು ಬಯಲುಸೀಮೆಗೆ ನೀರುಣಿಸುವ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಯ ಮೊದಲನೇ ಹಂತ ಲೋಕಾರ್ಪಣೆಗೊಂಡಿದೆ. ಗೌರಿ ಹಬ್ಬದ ಪವಿತ್ರದಿನದಂದು ಎತ್ತಿನಹೊಳೆ ಯೋಜನೆ ಮೂಲಕ ಗಂಗೆ, ಗೌರಿಯನ್ನು ಒಂದು ಮಾಡಿದ್ದೇವೆ. ಈ ಯೋಜನೆಯಿಂದ ಚಿಕ್ಕಮಗಳೂರು, ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಲ್ಲೆಗಳ ನೀರಿನ ಬವಣೆ ನೀಗಲಿದೆ. ಒಟ್ಟು 7 ಜಿಲ್ಲೆಗಳ 29 ತಾಲೂಕುಗಳಲ್ಲಿ ಬರುವ 6657 ಗ್ರಾಮಗಳು ಹಾಗೂ 38 ಪಟ್ಟಣ ಪ್ರದೇಶಗಳಲ್ಲಿನ 75 ಲಕ್ಷ ಜನರಿಗೆ ಈ ಯೋಜನೆಯಿಂದ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.
ಪಶ್ಚಿಮಘಟ್ಟದಿಂದ ಪೂರ್ವಕ್ಕೆ ನೀರನ್ನು ಹರಿಸುವುದು ಅಷ್ಟು ಸಲಭದ ಮಾತಲ್ಲ. ಆದರೆ ನಮ್ಮ ಗುರಿ, ಛಲದೊಂದಿಗೆ ನೀರು ಹರಿಸುವ ಕಾರ್ಯವನ್ನು ಯಶಸ್ವಿಗೊಳಿಸಿದ್ದೇವೆ. ಈ ವರ್ಷ ಎತ್ತಿನಹೊಳೆ ಯೋಜನೆಯ ಶೇ.50ರಷ್ಟು ಕಾಮಗಾರಿ ಪೂರ್ಣಗೊಳ್ಳಲಿದ್ದು, ಹೆಚ್ಚಿನ ನೀರು ಸಂಗ್ರಹಿಸುವ ಪ್ರಯತ್ನವೂ ನಡೆಯುತ್ತಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಇಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
Advertisement