ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಶಾಸಕರು/ಸಂಸದರ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಜೈಲು ಪಾಲಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಹಗರಣದ ಮಾಸ್ಟರ್ ಮೈಂಡ್ ಎಂದು ಇಡಿ ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಕರ್ನಾಟಕ ಪೊಲೀಸ್‌ನ ಅಪರಾಧ ತನಿಖಾ ಇಲಾಖೆ(ಸಿಐಡಿ) ಅಡಿಯಲ್ಲಿ ರಚನೆಯಾಗಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಸಲ್ಲಿಸಿದ ಚಾರ್ಜ್‌ಶೀಟ್, ಇಡಿ ಚಾರ್ಜ್ ಶೀಟ್ ಗೆ ವಿರುದ್ಧವಾಗಿದೆ. ಎಸ್ಐಟಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ನಾಗೇಂದ್ರ ಅವರ ಹೆಸರನ್ನು ಉಲ್ಲೇಖಿಸಿಲ್ಲ ಮತ್ತು ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಕಳೆದ ತಿಂಗಳು ಎಸ್‌ಐಟಿ, ವಾಲ್ಮೀಕಿ ಹಗರಣ ಮತ್ತು ನಿಗಮದ ಖಾತೆ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿತ್ತು.
ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಐಟಿ ಕಾಂಗ್ರೆಸ್‌ನ ಮಾಜಿ ಸಚಿವ ನಾಗೇಂದ್ರ ಮತ್ತು ಬುಡಕಟ್ಟು ಕಲ್ಯಾಣ ಮಂಡಳಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರನ್ನು ರಕ್ಷಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ತನಿಖೆಯ ವೇಳೆ ನಾಗೇಂದ್ರ ಮತ್ತು ದದ್ದಾಲ್‌ಗೆ ಸಮನ್ಸ್ ಜಾರಿ ಮಾಡದಿರುವ ಬಗ್ಗೆಯೂ ಎಸ್‌ಐಟಿ ತೀವ್ರ ಟೀಕೆಗೆ ಗುರಿಯಾಗಿತ್ತು.ಆದರೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಇಡಿ ನಾಗೇಂದ್ರ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಪ್ರಕರಣದಲ್ಲಿ ಅವರನ್ನು ಬಂಧಿಸಿದೆ.
ಸದ್ಯ ನಾಗೇಂದ್ರ ಜೈಲಿನಲ್ಲಿದ್ದು, ಇಡಿ ಚಾರ್ಜ್ ಶೀಟ್ ಪ್ರಕಾರ, ನಾಗೇಂದ್ರ ಅವರು ಹಗರಣದ ಕಿಂಗ್ ಪಿನ್ ಎಂದು ಹೆಸರಿಸಲಾಗಿದೆ. ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ ಅವರೊಂದಿಗೆ ನಾಗೇಂದ್ರ ನಿಕಟ ಸಂಪರ್ಕ ಹೊಂದಿದ್ದಾರೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಗೇಂದ್ರ ಅವರ ನಿರ್ದೇಶನದಂತೆ ಹಣದ ಸಂಪೂರ್ಣ ವಹಿವಾಟು ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ 21 ಕೋಟಿ ರೂಪಾಯಿ ದುರುಪಯೋಗವಾಗಿದೆ ಮತ್ತು ಬೆಂಗಳೂರು ಹಾಗೂ ಬಳ್ಳಾರಿ ನಗರಗಳಿಂದ ವಿವಿಧೆಡೆಗೆ ಹಣ ರವಾನೆಯಾಗಿದೆ ಎಂಬ ಆಘಾತಕಾರಿ ಅಂಶವನ್ನು ಚಾರ್ಜ್ ಶೀಟ್ ಬಹಿರಂಗಪಡಿಸಿದೆ.
ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಮತ್ತು ಇತರ ನಾಲ್ವರು ಆರೋಪಿಗಳನ್ನು ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಡಿ ಚಾರ್ಜ್ ಶೀಟ್ ಹೊಸ ವಿವಾದವನ್ನು ಹುಟ್ಟುಹಾಕುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೆ ಕೇಂದ್ರೀಯ ಸಂಸ್ಥೆಗಳು ತನಿಖೆಯಲ್ಲಿ ಮಧ್ಯಪ್ರವೇಶಿಸಿರುವುದಕ್ಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
Advertisement