ಬಿಜೆಪಿ ಅವಧಿಯ ಅಕ್ರಮಗಳ ತನಿಖೆಗೆ ಸಚಿವರ ಸಮಿತಿ; ಉದ್ಯಮಿಯ ಅಪಹರಣ-ಹಣಕ್ಕೆ ಬೇಡಿಕೆ, ನಾಲ್ವರು GST ಅಧಿಕಾರಿಗಳ ಬಂಧನ; ಮೈಸೂರು- ಕಲುಷಿತ ನೀರು ಸೇವನೆ 12 ಮಂದಿ ಅಸ್ವಸ್ಥ, ಓರ್ವ ಸಾವು; ಇವು ಇಂದಿನ ಪ್ರಮುಖ ಸುದ್ದಿಗಳು 11-09-2024

file pic
ಸಾಂಕೇತಿಕ ಚಿತ್ರonline desk

1. ಬಿಜೆಪಿ ಸರ್ಕಾರದ ಅವಧಿಯ ಅಕ್ರಮಗಳ ತನಿಖೆಗೆ ಸಚಿವರ ಸಮಿತಿ

BJP ಅವಧಿಯ ಅಕ್ರಮ ಆರೋಪಗಳ ತನಿಖೆಯನ್ನು ರಾಜ್ಯ ಸರ್ಕಾರ ಚುರುಕುಗೊಳಿಸಿದ್ದು, ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಅಕ್ರಮಗಳ ಕುರಿತು ತನಿಖೆ ನಡೆಸಲು ಗೃಹ ಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ 5 ಸಚಿವರ ಸಮಿತಿ ರಚಿಸಿದ್ದಾರೆ. ಒಟ್ಟು 26 ಹಗರಣಗಳ ಕುರಿತು ಈ ಸಮಿತಿ ತನಿಖೆ ನಡೆಸಲಿದೆ. ಸಮಿತಿಯಲ್ಲಿ ಸಚಿವರಾದ ಹೆಚ್.ಕೆ.ಪಾಟೀಲ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ್ ಲಾಡ್ ಇದ್ದಾರೆ. ಎರಡು ತಿಂಗಳ ಒಳಗೆ ಈ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಸೂಚಿಸಿದ್ದಾರೆ ಎಂದು ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ಸಮಿತಿ ರಚನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಇದರಲ್ಲಿ ಯಾವುದೇ ಸೇಡಿನ ರಾಜಕೀಯ ಇಲ್ಲ ಎಂದು ಸರ್ಕಾರದ ನಡೆಯನ್ನು ಸಮರ್ಥಿಸಿದ್ದು, ನಮ್ಮ ಸರ್ಕಾರ ಸೇಡಿನ ರಾಜಕಾರಣ ಮಾಡುವುದಿಲ್ಲ. ಆದರೆ ತಪ್ಪು ಮಾಡಿದವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಈಗ ಯಾರೂ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಸಿಎಂ ಸ್ಥಾನ ಖಾಲಿ ಇಲ್ಲ ಎಂದ ಸಿದ್ದರಾಮಯ್ಯ, ತಾವೇ ಸಿಎಂ ಆಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

2. ಉದ್ಯಮಿಯಿಂದ ಹಣಕ್ಕೆ ಬೇಡಿಕೆ, ಬೆದರಿಕೆ: ನಾಲ್ವರು ಜಿಎಸ್ ಟಿ ಅಧಿಕಾರಿಗಳ ಬಂಧನ

ಕೇಂದ್ರದ ನಾಲ್ವರು ಜಿಎಸ್ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜಿಎಸ್ಟಿಯ ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ ಸೋನಾಲಿ ಸಹಾಯಿ, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮನೋಜ್ ಸೈನಿ, ಅಧೀಕ್ಷಕ ಅಭಿಷೇಕ್‌, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ನಾಗೇಶ್ ಬಾಬು ಬಂಧಿತ ಅಧಿಕಾರಿಗಳಾಗಿದ್ದಾರೆ. ಪ್ರಕರಣವೊಂದನ್ನು ಮುಚ್ಚಿ ಹಾಕುವುದಕ್ಕಾಗಿ 1.5 ಕೋಟಿ ರೂ. ಹಣ ಪಡೆದು ಈ ಅಧಿಕಾರಿಗಳು ಪರಾರಿಯಾಗಿದ್ದರು ಈ ಬಗ್ಗೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಕೇಶವ್ ಎಂಬ ಉದ್ಯಮಿ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ದಾಳಿ ನಡೆಸಿ ಜಿಎಸ್ ಟಿ ಅಧಿಕಾರಿಗಳು ಈ ಕೃತ್ಯವೆಸಗಿದ್ದರು.

3. ಮೈಸೂರು: ಕಲುಷಿತ ನೀರು ಸೇವನೆಯಿಂದ 12 ಮಂದಿ ಅಸ್ವಸ್ಥ, ಓರ್ವ ಸಾವು

ಕಲುಷಿತ ನೀರು ಸೇವನೆಯಿಂದ ಓರ್ವ ಸಾವನ್ನಪ್ಪಿದ್ದು, 12 ಜನ ವಾಂತಿಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ಮೈಸೂರಿನ ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಟ್ಯಾಂಕ್‌ನಿಂದ ಸರಬರಾಜಾಗಿದ್ದ ನೀರನ್ನು ಸೇವಿಸಿ ಕೆಲವರಿಗೆ ವಾಂತಿ ಭೇದಿ ಆಗಿದೆ ಎಂದು ಶಂಕಿಸಲಾಗಿದೆ. ಅಸ್ವಸ್ಥರನ್ನು ತಕ್ಷಣವೇ ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗೋವಿಂದೇಗೌಡ ಎಂಬುವವರು ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿದ್ದು ತಾಲೂಕು ಆಸ್ಪತ್ರೆಯ ವೈದ್ಯರು ಬೆಟ್ಟಹಳ್ಳಿ ಗ್ರಾಮಕ್ಕೆ ಭೇಟಿ ಜನರ ಆರೋಗ್ಯ ಪರೀಕ್ಷೆ ನಡೆಸಿದ್ದಾರೆ.

4. EV ಸ್ಕೂಟರ್ ಪದೇ ಪದೇ ದುರಸ್ತಿ: ಯುವಕನಿಂದ ಎಲೆಕ್ಟ್ರಿಕ್ ಶೋ ರೂಮ್ ಗೆ ಬೆಂಕಿ

ಎಲೆಕ್ಟ್ರಿಕ್ ಬೈಕ್ ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಆಕ್ರೋಶಗೊಂಡ ಯುವಕನೋರ್ವ, ಎಲೆಕ್ಟ್ರಿಕ್ ಬೈಕ್ ಶೋ ರೂಂಗೆ ಬೆಂಕಿ ಹಚ್ಚಿರುವ ಘಟನೆ ಕಲಬುರಗಿ ಜಿಲ್ಲೆಯ ಹುಮನಾಬಾದ್ ರಸ್ತೆಯಲ್ಲಿ ನಡೆದಿದೆ. ನಿನ್ನೆ ಬೆಳಗ್ಗೆ ಶೋ ರೂಂ ಬೆಂಕಿ ತಗುಲಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ಶಂಕಿಸಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಇದು ಉದ್ದೇಶಪೂರ್ವಕ ಕುಕೃತ್ಯ ಎಂದು ತಿಳಿದುಬಂದಿದೆ. 20 ದಿನದ ಹಿಂದೆ ಓಲಾ ಕಂಪನಿಯ ಸ್ಕೂಟರ್ ಖರೀದಿಸಿದ್ದ ಮಹಮ್ಮದ್ ನದೀಮ್ ಎಂಬ ವ್ಯಕ್ತಿ ತನ್ನ ಏಲೆಕ್ಟ್ರಿಕ್ ಸ್ಕೂಟರ್ ಪದೇ ಪದೇ ರಿಪೇರಿಗೆ ಬರುತ್ತಿದೆ ಎಂದು ಸಿಟ್ಟಾಗಿದ್ದ. ಆತ ಸಿಬ್ಬಂದಿ ಜೊತೆ ವಾಗ್ವಾದ ಮಾಡಿ ಬಳಿಕ ಪೆಟ್ರೋಲ್ ತಂದು ಶೋ ರೂಂ ಒಳಗೆ ಬೆಂಕಿ ಹಚ್ಚಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆಯಲ್ಲಿ 6 ಹೊಸ ಎಲೆಕ್ಟ್ರಿಕ್ ಬೈಕ್ಗಳು ಸುಟ್ಟು ಭಸ್ಮವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.

5. ದೆಹಲಿಯಲ್ಲಿ ಕೇಂದ್ರ ಸಚಿವರೊಂದಿಗೆ MBPಚರ್ಚೆ 

ದೆಹಲಿ ಪ್ರವಾಸದಲ್ಲಿರುವ ಸಚಿವ ಎಂಬಿ ಪಾಟೀಲ್, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಅಭಿವೃದ್ಧಿ ಕುರಿತು ಸಹಕಾರ ನೀಡಲು ಮನವಿ ಮಾಡಿದ್ದಾರೆ. 2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಪಾಟೀಲ ದೆಹಲಿಗೆ ತೆರಳಿದ್ದಾರೆ. ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವು ಕುರಿತು ಎಂ ಬಿ ಪಾಟೀಲ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಚರ್ಚೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com