ಬೆಂಗಳೂರು: ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆಯಲ್ಲಿ ನಡೆದ ಕಲ್ಲುತೂರಾಟ ಮತ್ತು ಗಲಭೆ ಬಗ್ಗೆ ರಾಜ್ಯ ಬಿಜೆಪಿ ಸತ್ಯ ಶೋಧನಾ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿ ನಾಗಮಂಗಲಕ್ಕೆ ತೆರಳಿ ಅಧ್ಯಯನ ನಡೆಸಿ ಒಂದು ವಾರದಲ್ಲಿ ವರದಿ ನೀಡಲಿದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.
ಶಾಸಕರಾದ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಭೈರತಿ ಬಸವರಾಜ, ಮಾಜಿ ಸಚಿವ ಕೆ. ಸಿ. ನಾರಾಯಣಗೌಡ, ರಾಜ್ಯ ಬಿಜೆಪಿ ಕಾರ್ಯದರ್ಶಿ ಅಶ್ವಿನ್ ಗೌಡ ಮತ್ತು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರರಾವ್ ಈ ಸಮಿತಿಯಲ್ಲಿದ್ದಾರೆ.
ಗಣಪತಿ ವಿಸರ್ಜನೆಗೆ ತೆರಳುತ್ತಿದ್ದ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದರಿಂದ ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಬುಧವಾರ ರಾತ್ರಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು. ನಾಗಮಂಗಲ ಟಿ.ಬಿ. ಬಡಾವಣೆಯ ಬದರಿಕೊಪ್ಪಲಿನ ಗಜಪಡೆ ಯುವಕರ ಸಂಘದಿಂದ ಗಣೇಶ ಮೂರ್ತಿ ಪ್ರತಿಷ್ಟಾಪಿಸಲಾಗಿತ್ತು. ಬದರಿಕೊಪ್ಪಲಿನಿಂದ ಮೈಸೂರು ರಸ್ತೆಯ ದರ್ಗಾ ಬಳಿ ಮೆರವಣಿಗೆ ತೆರಳುತ್ತಿದ್ದಂತೆ ಕಿಡಿಗೇಡಿಗಳು ಏಕಾಏಕಿ ಕಲ್ಲು, ಬಾಟಲಿಗಳನ್ನು ಎಸೆದಿದ್ದಾರೆ. ಬಳಿಕ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ದುಷ್ಕರ್ಮಿಗಳ ಗುಂಪು ಅಂಗಡಿ, ಅಂಗಡಿ ಮುಂದಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿದೆ. ಅಷ್ಟೇ ಅಲ್ಲದೆ ರಸ್ತೆ ಮಧ್ಯೆ ಕತ್ತಿ ಹಿಡಿದು ಝಳಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಹಿಂದೂಪರ ಸಂಘಟನೆಗಳು ಕೂಡಾ ಪ್ರತಿದಾಳಿ ನಡೆಸಿದ್ದಾರೆ. ಪೊಲೀಸರು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಆದಾಗ್ಯೂ, ಮುನ್ನೆಚ್ಚರಿಕೆ ಕ್ರಮವಾಗಿ ಸೆಪ್ಟೆಂಬರ್ 14ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
Advertisement