ಬೆಂಗಳೂರು: ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಸವರ್ಣಿಯ ಯುವಕನ ವಿರುದ್ಧ ದೂರು ದಾಖಲಿಸಿದ ದಲಿತ ಕುಟುಂಬವೊಂದನ್ನು ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಆತಂಕಕಾರಿ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದು, ಶುಕ್ರವಾರ ತಡವಾಗಿ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ 14 ವರ್ಷದ ದಲಿತ ಸಮುದಾಯದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭಿಣಿ ಮಾಡಿದ್ದ ಸವರ್ಣೀಯ ಯುವಕನ ವಿರುದ್ಧ ಪೋಷಕರು ಆಗಸ್ಟ್ 12 ರಂದು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.
ಸರ್ವಣೀಯ ಸಮುದಾಯದ ನಾಯಕರು ದಲಿತ ಕುಟುಂಬಕ್ಕೆ ಸಂಧಾನವಾಗುವಂತೆ ಕೇಳಿಕೊಂಡಿದ್ದಾರೆ. ಆದರೆ, ಅವರ ಮಾತನ್ನು ಒಪ್ಪದ ದಲಿತ ಕುಟುಂಬ ಆರೋಪಿ ವಿರುದ್ಧ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ದೂರು ದಾಖಲಿಸಿದ್ದರಿಂದ ಕುಪಿತಗೊಂಡ ಮೇಲ್ಜಾತಿ ನಾಯಕರು, ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ಗ್ರಾಮದ ಅಂಗಡಿಗಳಲ್ಲಿ ದಿನಸಿ, ಮತ್ತಿತರ ದೈನಂದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ ಎನ್ನಲಾಗಿದೆ. ಈ ಕುಟುಂಬಕ್ಕೆ ಸೇರಿದ ಮಕ್ಕಳಿಗೆ ಪೆನ್, ನೋಟ್ ಬುಕ್, ಪೆನ್ಸಿಲ್ ನಂತಹ ಮೂಲಭೂತ ಸಾಮಾಗ್ರಿಗಳನ್ನು ಅಂಗಡಿಯವರು ನೀಡುತ್ತಿಲ್ಲ. ಈ ಸಾಮಾಜಿಕ ಬಹಿಷ್ಕಾರದಿಂದ ಕುಟುಂಬ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಈ ಘಟನೆ ಬಗ್ಗೆ ದಲಿತ ಸಂಘಟನೆಗಳು ಧ್ವನಿ ಎತ್ತಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ. ಪೊಲೀಸರು ಹಾಗೂ ಜಿಲ್ಲಾಡಳಿತ ಸರ್ವಣೀಯ ಹಾಗೂ ದಲಿತ ನಾಯಕರ ನಡುವೆ ಸಭೆ ನಡೆಸುವ ಮೂಲಕ ಗ್ರಾಮದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
Advertisement