ಹಾಲಿನ ಬೆಲೆ ಮತ್ತೆ ಏರಿಕೆ?; ನಾಗಮಂಗಲ ಶಾಂತವಾಗಿದೆ, ಕಾನೂನು ಕೈಗೆತ್ತಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ-ಡಾ.ಜಿ ಪರಮೇಶ್ವರ್; ನಾಗಮಂಗಲಕ್ಕೆ HDK ಭೇಟಿ; ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ; ಇವು ಇಂದಿನ ಪ್ರಮುಖ ಸುದ್ದಿಗಳು 14-09-2024

File pic
ಸಂಗ್ರಹ ಚಿತ್ರonline desk

1. ಹಾಲಿನ ದರ ಏರಿಕೆ ಸುಳಿವು

ಕಳೆದ ಜೂನ್ ತಿಂಗಳಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರಿಗೆ 2 ರೂಪಾಯಿ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಇದೀಗ ಮತ್ತೆ ಹಾಲಿನ ದರ ಹೆಚ್ಚಿಸುವ ಸಾಧ್ಯತೆಯಿದೆ. ರಾಮನಗರ ಜಿಲ್ಲೆಯ ಮಾಗಡಿಯಲ್ಲಿಂದು ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಂದಿನ ಹಾಲಿನ ದರವನ್ನು ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಹೆಚ್ಚಳ ಮಾಡಿದ ಹಾಲಿನ ದರ ನೇರವಾಗಿ ರೈತರಿಗೆ ಹೋಗಬೇಕು. ಈ ಸಂಬಂಧ ಸಭೆ ಕರೆದು ಮಾತುಕತೆ ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

2. ನಾಗಮಂಗಲ ಗಲಭೆ: SI ಅಮಾನತು

ನಾಗಮಂಗಲ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ನಾಗಮಂಗಲ ‌ಪಟ್ಟಣ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್‌ ಅಶೋಕ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣ ಸಂಬಂಧ ಇನ್ನೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 55 ಮಂದಿ ಬಂಧನವಾಗಿದೆ. ಪರಿಸ್ಥಿತಿ ಶಾಂತಿಯುತವಾಗಿದ್ದರೂ, ನಗರದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ, ಮುನ್ನೆಚ್ಚರಿಕೆ ಕ್ರಮವಾಗಿ ಸೆಪ್ಟೆಂಬರ್ 14 ರವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಘಟನೆ ಸಂಬಂಧ 150 ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ತಲೆಮರೆಸಿಕೊಂಡ 97 ಗಲಭೆಕೋರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

3. ನಾಗಮಂಗಲ ಗಲಭೆ: ಗುಪ್ತಚರ ಇಲಾಖೆ ಎಡಿಜಿಪಿ ಶರತ್ ಚಂದ್ರ ವರ್ಗಾವಣೆ

ನಾಗಮಂಗಲ ಗಲಭೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆಯ ವೈಫಲ್ಯ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲೇ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಗುಪ್ತಚರ ಇಲಾಖೆ ಎಡಿಜಿಪಿಯಾಗಿದ್ದ ಶರತ್ ಚಂದ್ರ ಅವರನ್ನು ಟ್ರಾಫಿಕ್, ರಸ್ತೆ ಸುರಕ್ಷತಾ ಎಡಿಜಿಪಿಯನ್ನಾಗಿ ಹಾಗೂ ಪೊಲೀಸ್ ಇಲಾಖೆ ನೇಮಕಾತಿ ವಿಭಾಗದ ನಿರ್ದೇಶಕರನ್ನಾಗಿ ಹೆಚ್ಚುವರಿ ಜವಾಬ್ದಾರಿ ನೀಡಿ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಗುಪ್ತಚರ ಇಲಾಖೆಯ ಎಡಿಜಿಪಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಹೇಮಂತ್ ನಿಂಬಾಳ್ಕರ್ ವಾರ್ತಾ ಮತ್ತು ಸಂಪರ್ಕ ಇಲಾಖೆ ಆಯುಕ್ತರಾಗಿಯೂ ಮುಂದುವರೆಯಲಿದ್ದಾರೆ.

4. ಗಲಭೆ ಸಂಭವಿಸಿದ ನಾಗಮಂಗಲಕ್ಕೆ ಹೆಚ್ ಡಿ ಕುಮಾರಸ್ವಾಮಿಭೇಟಿ, ಬಿಜೆಪಿಯಿಂದ ಸತ್ಯ ಶೋಧನ ಸಮಿತಿ

ಗಲಭೆ ಸಂಭವಿಸಿರುವ ಮಂಡ್ಯ ಜಿಲ್ಲೆ ನಾಗಮಂಗಲಕ್ಕೆ ಕೇಂದ್ರ ಸಚಿವ ಹೆಚ್'ಡಿ.ಕುಮಾರಸ್ವಾಮಿ ಶುಕ್ರವಾರ ಭೇಟಿ ನೀಡಿದ್ದು, ಅಧಿಕಾರಿಗಳಿಂದ ವಾಸ್ತವಿಕ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸ್ಥಳದಲ್ಲೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಈ ರೀತಿಯ ಅವಾಂತರ ಸಂಭವಿಸುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ, ಇದು ನಿಜವಾಗಿಯೂ ನೋವಿನ ಸಂಗತಿ. ಎಸ್ಪಿ ಮತ್ತು ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ. ಅವರ ಮಧ್ಯಸ್ಥಿಕೆ ಮತ್ತು ತಕ್ಷಣದ ಕ್ರಮದಿಂದಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಿದರು. ಈ ಮಧ್ಯೆ, ಗಲಭೆ ಬಗ್ಗೆ ರಾಜ್ಯ ಬಿಜೆಪಿ ಸತ್ಯ ಶೋಧನಾ ಸಮಿತಿಯೊಂದನ್ನು ರಚಿಸಿದೆ. ಈ ತಂಡ ನಾಗಮಂಗಲಕ್ಕೆ ತೆರಳಿ ಅಧ್ಯಯನ ನಡೆಸಿ ಒಂದು ವಾರದಲ್ಲಿ ವರದಿ ನೀಡಲಿದೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

5. ನಾಗಮಂಗಲ ಶಾಂತವಾಗಿದೆ, ಕಾನೂನು ಕೈಗೆತ್ತಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ-ಡಾ.ಜಿ ಪರಮೇಶ್ವರ್

ನಾಗಮಂಗಲ ಪಟ್ಟಣದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ ಪರಮೇಶ್ವರ ಎಚ್ಚರಿಕೆ ನೀಡಿದ್ದಾರೆ. ಪ್ರತಿಪಕ್ಷಗಳು ಈ ಪ್ರಕರಣವನ್ನು "ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ" ಎಂದು ವಾಗ್ದಾಳಿ ನಡೆಸಿದ ಪರಮೇಶ್ವರ, ಘಟನೆಯಿಂದಾಗಿ ಜೀವನೋಪಾಯಕ್ಕೆ ತೊಂದರೆಯಾದವರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದರು. ಈಮಧ್ಯೆ, ನಾಗಮಂಗಲ ಹಿಂಸಾಚಾರ ಖಂಡಿಸಿ ಬೆಂಗಳೂರಿನ ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಲು ಯತ್ನಿಸಿದ ಸುಮಾರು 40 ಮಂದಿಯನ್ನು ಶುಕ್ರವಾರ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮುಸ್ಲಿಮರ ಹಬ್ಬ ಈದ್ ಮಿಲಾದ್ ಆಚರಣೆಗೆ ಬೆಂಗಳೂರು ಪೊಲೀಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಸೋಮವಾರ ಈದ್ಮಿಲಾದ್ ಪ್ರಯುಕ್ತ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೆ ಹರಿತವಾದ ವಸ್ತುಗಳನ್ನು ಹೊಂದಿರಬಾರದು. ಮೆರವಣಿಗೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಡಿಜೆಗಳನ್ನು ಬಳಸಬಾರದು. ಸ್ತಬ್ದ ಚಿತ್ರಗಳು ಯಾವುದೇ ಪ್ರಚೋದನಾತ್ಮಕ ಅಂಶಗಳನ್ನು ಒಳಗೊಂಡಿರಬಾರದು. ಯಾವುದೇ ಪೂಜಾ ಸ್ಥಳಗಳ ಮುಂಭಾಗದಲ್ಲಿ ಘೋಷಣೆಗಳನ್ನು ಕೂಗಬಾರದು ಎಂಬ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

6. ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಮತ್ತು ಗ್ಯಾಂಗ್‌ನ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್ ಶುಕ್ರವಾರ ಸೆಪ್ಟೆಂಬರ್ 17ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com