
ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ವೈಫಲ್ಯ ಇದೆ ಎಂಬ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲೇ ರಾಜ್ಯ ಸರ್ಕಾರ ಶುಕ್ರವಾರ ಹಿರಿಯ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ.
ಗುಪ್ತಚರ ಇಲಾಖೆ ಎಡಿಜಿಪಿಯಾಗಿದ್ದ ಶರತ್ ಚಂದ್ರ ಅವರನ್ನು ಟ್ರಾಫಿಕ್, ರಸ್ತೆ ಸುರಕ್ಷತಾ ಎಡಿಜಿಪಿಯನ್ನಾಗಿ ಹಾಗೂ ಪೊಲೀಸ್ ಇಲಾಖೆ ನೇಮಕಾತಿ ವಿಭಾಗದ ನಿರ್ದೇಶಕರನ್ನಾಗಿ ಹೆಚ್ಚುವರಿ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದೇ ವೇಳೆ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಗುಪ್ತಚರ ಇಲಾಖೆಯ ನೂತನ ಎಡಿಜಿಪಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಹೇಮಂತ್ ನಿಂಬಾಳ್ಕರ್ ಅವರು ವಾರ್ತಾ ಮತ್ತು ಸಂಪರ್ಕ ಇಲಾಖೆ ಆಯುಕ್ತರಾಗಿಯೂ ಮುಂದುವರೆಯಲಿದ್ದಾರೆ.
ನಾಗಮಂಗಲ ಗಲಭೆ ವಿಚಾರ ಸದ್ಯ ಸಕಷ್ಟು ಚರ್ಚೆಗೆ ಗ್ರಾಸವಾಗುತ್ತಿದ್ದು, ಪ್ರಕರಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಈ ಮಧ್ಯೆ ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಎತ್ತಂಗಡಿ ಮಾಡಿರುವುದು ಮತ್ತಷ್ಟು ಅನುಮಾನ ಮತ್ತು ಕುತೂಹಲ ಕೆರಳಿಸಿದೆ.
ಈ ಹಿಂದೆ ಸಿದ್ದರಾಮಯ್ಯ ಆಡಳಿತದಲ್ಲಿ ಅಂದರೆ 2013 ರಿಂದ 18ರಲ್ಲಿ ಹೇಮಂತ್ ನಿಂಬಾಳ್ಕರ್ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದರು. ಇದೀಗ ಮತ್ತೆ ಹೇಮಂತ್ ನಿಂಬಾಳ್ಕರ್ಗೆ ಸಿದ್ದರಾಮಯ್ಯ ಮಣೆ ಹಾಕಿದ್ದಾರೆ.
Advertisement