ವಿಜಯಪುರ: ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಬಂಧನ ಪ್ರಕರಣಕ್ಕೆ ಸಂಬಂಧಿಸಿ ಆಡಿಯೊದಲ್ಲಿ ಏನಿದೆ ನನಗೆ ಗೊತ್ತಿಲ್ಲ, ನಕಲಿ ಆಡಿಯೋಗಳನ್ನು ಇತ್ತೀಚೆಗೆ ಸೃಷ್ಟಿಸುವವರು ಹೆಚ್ಚಾಗಿದ್ದಾರೆ. ಹಾಸ್ಯ ಕಲಾವಿದ ಒಬ್ಬ ಇದ್ದಾನೆ, ಎಷ್ಟು ಚೆಂದ ಮಿಮಿಕ್ರಿ ಮಾಡುತ್ತಾರೆ. ಆಡಿಯೊ ಕುರಿತು ತನಿಖೆ ನಡೆಯಬೇಕು ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಕಾಂಗ್ರೆಸ್ನವರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಮರು ಬೇಕಾಗಿದ್ದಾರೆ. ಮುಸ್ಲಿಮರ ಸಲುವಾಗಿಯೇ ಕಾಂಗ್ರೆಸ್ ಪಕ್ಷ ಇದೆ, ಹಿಂದೂಗಳಿಗೆ ಅಲ್ಲ. ಯಾದಗಿರಿಯಲ್ಲಿ ದಲಿತ ಸಮುದಾಯದ ಪಿಎಸ್ಐ ಆತ್ಮಹತ್ಯೆ ಮಾಡಿಕೊಂಡರು. ದಲಿತ ಸಂಘಟನೆಗಳು ಎಲ್ಲಿವೆ ಎಂದು ನಾನು ಕೇಳುತ್ತೇನೆ. ಕೆಲವು ಮುಖಂಡರು ಪೇಯ್ಡ್ ಸರ್ವೆಂಟ್ ಇದ್ದಾರೆ, ಪೇಟಿಎಂ ಇದ್ದಂಗೆ, ಹಣ ಹಾಕಿದ ಕೂಡಲೇ ಕೆಲ ಸಂಘಟನೆಗಳು ಮಾತಾಡುತ್ತವೆ. ಹಣ ಕಡಿಮೆ ಆಯ್ತು ಅಂದರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಅಂತಾರೆ.
ರಾತ್ರಿ ಪೇಮೆಂಟ್ ಆಯ್ತು ಅಂದರೆ ಹೋರಾಟ ಹಿಂಪಡೆಯಲಾಯ್ತು ಅಂತಾರೆ. ಇಂತಹ ಸಂಘಟನೆಗಳಿಂದ ದಲಿತ ಸಮುದಾಯ ಉದ್ಧಾರ ಆಗುವುದಿಲ್ಲ. ದಲಿತರು ಹೊಸ ನಾಯಕತ್ವದ ಚಿಂತನೆ ಮಾಡಬೇಕು. ಅಂಬೇಡ್ಕರ್ ಅವರ ನಿಜವಾದ ಅನುಯಾಯಿ ಆಗಿದ್ದರೆ ಕಾಂಗ್ರೆಸ್ನಲ್ಲಿರಲ್ಲ. ಡಾ.ಅಂಬೇಡ್ಕರ್ ಬಗ್ಗೆ ದಲಿತ ಮುಖಂಡರು ಮೊದಲು ಓದಿಕೊಳ್ಳಲಿ. ಕಾಂಗ್ರೆಸ್ಗೆ ಎಂದೂ ಸೇರಬೇಡಿ ಅಂತಾ ಅಂಬೇಡ್ಕರ್ ಕರೆ ಕೊಟ್ಟಿದ್ದರು. ಕಾಂಗ್ರೆಸ್ನಲ್ಲಿರುವ ದಲಿತ ಮುಖಂಡರು ಅಂಬೇಡ್ಕರ್ ಅನುಯಾಯಿಗಳಲ್ಲ. ಅವರೆಲ್ಲ ಕಮರ್ಷಿಯಲ್ ಎಂದರು.
ರಾಹುಲ್ ಗಾಂಧಿ ಬಗ್ಗೆ ಮಾತನಾಡಿದರೆ ಕೇಸ್ ದಾಖಲಿಸುವ ವಿಚಾರವಾಗಿ ಮಾತನಾಡಿದ್ದು, ಕೇಸ್ ಮಾಡಲಿ ಬಿಡಿ, ನಾನು ಯಾರಿಗೂ ಅಂಜಲ್ಲ. ನಮ್ಮ ಪಕ್ಷದ ಮಹಾನಾಯಕರಿಗೆ ಅಂಜಿಲ್ಲ, ಇವರ್ಯಾರು ಎಂದು ಗುಡುಗಿದ್ದಾರೆ. ಯಾವ ಮಹಾ ನಾಯಕರಿಗೂ ನಾನು ಅಂಜುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
Advertisement