ಕಾಳುಮೆಣಸಿಗೆ ಜಿಎಸ್‌ಟಿ ವಿನಾಯಿತಿ ಮುಂದುವರಿಸುವಂತೆ ನಿರ್ಮಲಾ ಸೀತಾರಾಮನ್ಗೆ ಯದುವೀರ್ ಮನವಿ
ನವದೆಹಲಿ: ಕಾಳುಮೆಣಸಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವುದನ್ನು ಮುಂದುವರಿಸುವಂತೆ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ.
ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರ ಪ್ರಮುಖ ಸಮಸ್ಯೆಯಾದ ಕಾಳುಮೆಣಸಿಗೆ ಜಿಎಸ್‌ಟಿ ವಿನಾಯಿತಿ ಕುರಿತು ಚರ್ಚಿಸಲು ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ವಿನಾಯಿತಿ ಮುಂದುವರಿಕೆಗೆ ವಿನಂತಿಸಲಾಗಿದೆ ಎಂದು ಯದುವೀರ್ ಒಡೆಯರ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರೈತರ ಕೃಷಿ ಉತ್ಪನ್ನ ವರ್ಗೀಕರಣ ಮತ್ತು ರಫ್ತುಗಳ ಮೇಲೆ ಆಗುವಂತಹ ಪರಿಣಾಮಗಳನ್ನು ಉಲ್ಲೇಖಿಸಿ ಜಿಎಸ್ ಟಿ ವಿನಾಯಿತಿ ಮುಂದುವರಿಕೆಗೆ ಮನವಿ ಮಾಡಲಾಗಿದೆ ಎಂದು ಬಿಜೆಪಿ ಸಂಸದರು ತಿಳಿಸಿದ್ದಾರೆ.
ರೈಲ್ವೆ ಹಳಿ ಬಳಸಿ ಬೇಲಿ ನಿರ್ಮಾಣದಿಂದ ಮಾನವ-ಆನೆ ಸಂಘರ್ಷಕ್ಕೆ ಕಡಿವಾಣ
ರೈಲ್ವೆ ಹಳಿ ಬಳಸಿ ಬೇಲಿ ನಿರ್ಮಾಣದಿಂದ ಮಾನವ-ಆನೆ ಸಂಘರ್ಷಕ್ಕೆ ಕಡಿವಾಣ ಹಾಕಬಹುದು ಎಂದಿರುವ ಯದುವೀರ್ ಒಡೆಯರ್ ಅವರು, ಇದಕ್ಕೆ ಪ್ರತಿ ಕಿಲೋಮೀಟರ್‌ಗೆ ಸುಮಾರು 1.3 ರಿಂದ 1.5 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರಿಗೆ ಬರೆದಿರುವ ಪತ್ರವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಆನೆಗಳ ಚಲನವಲನವನ್ನು ನಿರ್ಬಂಧಿಸಲು ರೈಲ್ವೆ(ಲೈನ್‌ಗಳು) ಬ್ಯಾರಿಕೇಡಿಂಗ್ ಪರಿಣಾಮಕಾರಿ ಮಾರ್ಗವೆಂದು ಸಾಬೀತಾಗಿದೆ. ಇದನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಬಹುದು ಎಂದು ಸಲಹೆ ನೀಡಿದ್ದಾರೆ.
ಸಂಬಂಧಿತ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ, ಪ್ರತಿ ಕಿಲೋಮೀಟರ್‌ಗೆ ಬ್ಯಾರಿಕೇಡಿಂಗ್‌ನ ವೆಚ್ಚವು 1.3 ಕೋಟಿಯಿಂದ 1.5 ಕೋಟಿ ರೂಪಾಯಿಗಳು ಎಂದು ನನ್ನ ತಿಳುವಳಿಕೆಗೆ ಬಂದಿದೆ.
ನನ್ನ ಕ್ಷೇತ್ರದ ಅರಣ್ಯಗಳ ಗಡಿ 400 ಕಿ.ಮೀ.ಗೂ ಹೆಚ್ಚು ವ್ಯಾಪಿಸಿದ್ದು, ಸುಮಾರು 280 ಕಿ.ಮೀ ಅರಣ್ಯ ಗಡಿಗೆ ತಕ್ಷಣದ ಬ್ಯಾರಿಕೇಡಿಂಗ್ ಅಗತ್ಯವಿದ್ದು, ಇದಕ್ಕೆ 350 ಕೋಟಿಯಿಂದ 400 ಕೋಟಿ ವೆಚ್ಚವಾಗಲಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ