ತುಮಕೂರು: ಆಸ್ಪತ್ರೆಯ ಅಧಿಕಾರಿಗಳು ಆಂಬ್ಯುಲೆನ್ಸ್ ನಿರಾಕರಿಸಿದ ನಂತರ ಇಬ್ಬರು ಸಹೋದರರು ತಮ್ಮ ಮೃತ ತಂದೆಯ ಶವವನ್ನು ಮೋಟಾರ್ ಬೈಕ್ ನಲ್ಲಿ ಸಾಗಿಸಿದ ಹೃದಯ ವಿದ್ರಾವಕ ಘಟನೆ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಸಹೋದರರಾದ ಚಂದ್ರಣ್ಣ ಮತ್ತು ಗೋಪಾಲಪ್ಪ ಅವರು ಶವವನ್ನು ಆಸ್ಪತ್ರೆಯಿಂದ ಸುಮಾರು 3-4 ಕಿಮೀ ದೂರದಲ್ಲಿರುವ ದಳವಾಯಿಹಳ್ಳಿ ಗ್ರಾಮಕ್ಕೆ ಸಾಗಿಸಿದ್ದಾರೆ. ಅಸ್ವಸ್ಥರಾಗಿದ್ದ ತಮ್ಮ ತಂದೆ ಗುಡುಗುಳ್ಳ ಹೊನ್ನೂರಪ್ಪ (80) ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದರು, ಆದರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಮೃತದೇಹವನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಅವರು ಆಂಬ್ಯುಲೆನ್ಸ್ ಸೇವೆಯನ್ನು ಕೋರಿದ್ದರು, ಆದರೆ ಅಧಿಕಾರಿಗಳು ನಿರಾಕರಿಸಿದರು. ಪಾವಗಡ ಕಾಂಗ್ರೆಸ್ ಶಾಸಕ ಎಚ್.ವಿ.ವೆಂಕಟೇಶ್ ಮಧ್ಯ ಪ್ರವೇಶಿಸಿದರೂ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಾಗ್ವಾದದ ನಂತರ, ಅವರು ತಮ್ಮ ಮೋಟಾರ್ ಸೈಕಲ್ ನಲ್ಲಿ ಶವವನ್ನು ಸಾಗಿಸಲು ನಿರ್ಧರಿಸಿದರು. ಪಾವಗಡದಿಂದ ಮತ್ತೊಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಆಡಳಿತ ವೈದ್ಯಾಧಿಕಾರಿ ಲೋಕೇಶ್ ರೆಡ್ಡಿ ಪ್ರಯತ್ನಿಸಿದ್ದರು, ಆದರೆ ಸಹೋದರರು ತಮ್ಮ ತಂದೆಯ ಶವದೊಂದಿಗೆ ಸ್ಥಳದಿಂದ ತೆರಳಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎನ್.ಮಂಜುನಾಥ್ ತಿಳಿಸಿದ್ದಾರೆ. "ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಮೃತದೇಹವನ್ನು ಸಾಗಿಸಿದರೆ ಮತ್ತೆ ಅದೇ ಆ್ಯಂಬುಲೆನ್ಸ್ ಬಳಸಲು ಸ್ಥಳೀಯ ಜನರು ಭಯಪಡುತ್ತಾರೆ, ಹೀಗಾಗಿ ಸೇವೆಯನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಅವರು ಹೇಳಿದರು.
Advertisement