ಬೆಂಗಳೂರು: ಮುಕ್ತ ನ್ಯಾಯಾಲಯದಲ್ಲಿ ತಾವು ನೀಡಿದ ಹೇಳಿಕೆ ಉದ್ದೇಶಪೂರ್ವಕವಲ್ಲ. ಆದರೂ ತಮ್ಮ ಹೇಳಿಕೆಯಿಂದ ಯಾವುದೇ ವ್ಯಕ್ತಿ, ಸಮಾಜ ಅಥವಾ ಸಮುದಾಯಕ್ಕೆ ನೋವುಂಟುಮಾಡಿದ್ದರೆ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಶನಿವಾರ ಹೇಳಿದ್ದಾರೆ.
ಪ್ರಕರಣವೊಂದರ ವಿಚಾರಣೆ ವೇಳೆ ಬೆಂಗಳೂರಿನ ಗೋರಿಪಾಳ್ಯ 'ಪಾಕಿಸ್ತಾನ'ದಂತಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್, ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಗೆ ಸೂಚಿಸಿತ್ತು. ಇದೀಗ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಇಂದು ನ್ಯಾಯಾಲಯದ ಕಲಾಪದ ವೇಳೆ ತಮ್ಮ ಹೇಳಿಕೆ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, ತಾವು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಯಾವುದೇ ಉದ್ದೇಶಪೂರ್ವಕವಾಗಿದ್ದಲ್ಲ. ಇದರಿಂದ ಯಾವುದೇ ವ್ಯಕ್ತಿ, ಸಮುದಾಯಕ್ಕೆ ನೋವುಂಟಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದರು.
ಶ್ರೀಶಾನಂದ ಅವರ ವಿಡಿಯೋ ವೈರಲ್ ಆದ ನಂತರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಕಲಾಪದ ನೇರ ಪ್ರಸಾರವನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸುವಂತೆ ಬೆಂಗಳೂರು ವಕೀಲರ ಸಂಘ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿಗೆ ಮನವಿ ಸಲ್ಲಿಸಿತ್ತು.
ಬಳಿಕ, ಪೂರ್ವಾನುಮತಿ ಪಡೆಯದೇ ಲೈವ್ ಸ್ಟ್ರೀಮಿಂಗ್‌ನ ಮರು ಪ್ರಸಾರ, ವರ್ಗಾವಣೆ, ಅಪ್‌ಲೋಡ್ ಮಾಡುವುದು, ಪೋಸ್ಟ್ ಮಾಡುವುದು, ಮಾರ್ಪಾಡು ಮಾಡುವುದು ಪ್ರಸಾರ ಅಥವಾ ಮರು ಪ್ರಸಾರ ಮಾಡುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿತ್ತು.
Advertisement