ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ನಿರ್ಧಾರ ವಿರುದ್ಧ ಹೋರಾಟ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸವಾಲು ಎದುರಾಗಿದೆ. ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ 'ರೀಡೂ ವರದಿ ನೀಡುವಂತೆ ಸರ್ಕಾರಕ್ಕೆ ರಾಜ್ಯಪಾಲ ಥಾವರಚಂದ್ ಗೆಹಲೋಟ್ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಈ ಹಿಂದಿನ ಆಡಳಿತಾವಧಿಯಲ್ಲಿ ‘ರೀಡೂ’ ಹೆಸರಿನಲ್ಲಿ ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಶನ್ ಮಾಡಿದ್ದಾರೆಂಬ ಆರೋಪವಿದ್ದು, ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಆಯೋಗದ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಪತ್ರದಲ್ಲಿ ಕೇಳಿದ್ದಾರೆ.
ರಾಜ್ಯಪಾಲರಿಗೆ ಆಗಸ್ಟ್ 24ರಂದು ಪತ್ರ ಬರೆದಿದ್ದ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ, ಕೆಂಪಣ್ಣ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು.
ತುಂಗಭದ್ರಾ ಜಲಾಶಯಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಒಟ್ಟಾಗಿ ಬಾಗಿನ ಅರ್ಪಿಸಿದರು. 19ನೇ ಕ್ರೆಸ್ಟ್ ಗೇಟ್ ಕೊಚ್ಚಿಹೋಗಿದ್ದ ಬಳಿಕ ಮತ್ತೊಮ್ಮೆ ಜಲಾಶಯ ಭರ್ತಿಯಾಗಿದೆ. ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟನ್ನು ಪರಿಶೀಲಿಸಲು ಸಿದ್ದರಾಮಯ್ಯ ಆಗಸ್ಟ್ 13ಕ್ಕೆ ಇಲ್ಲಿಗೆ ಬಂದಿದ್ದರು. ತುಂಗಭದ್ರಾ ಜಲಾಶಯಕ್ಕೆ ಇತ್ತೀಚೆಗೆ ಕೇಂದ್ರದ ತಜ್ಞರ ತಂಡ ಭೇಟಿ ನೀಡಿದ್ದು, ಅವರ ವರದಿಯನ್ನು ಆಧರಿಸಿ ಕ್ರಸ್ಟ್ ಗೇಟ್ ಬದಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಈ ವೇಳೆ ತಿಳಿಸಿದರು. ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ್ದಾರೆ. ಈ ವೇಳೆ ಸಚಿವರಾದ ಶಿವರಾಜ ತಂಗಡಗಿ,ಜಮೀರ್ ಅಹ್ಮದ್ ಖಾನ್, ಶರಣಪ್ರಕಾಶ್ ಪಾಟೀಲ್ ಸೇರಿ ಹಲವು ಶಾಸಕರು ಭಾಗಿಯಾಗಿದ್ದರು.
ರಾಜ್ಯದ ಹಲವೆಡೆ ಇಂದು ಭೀಕರ ಅಪಘಾತಗಳು ಸಂಭವಿಸಿದ್ದು ಪ್ರತ್ಯೇಕ ಘಟನೆಗಳಲ್ಲಿ 6 ಜನ ಮೃತಪಟ್ಟಿದ್ದಾರೆ. ಯೂ ಟರ್ನ್ ಪಡೆಯುವ ವೇಳೆ ಬೈಕ್ಗೆ ಟ್ರಾಕ್ಟರ್ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದ್ದರೆ, ಚಿಕ್ಕಬಳ್ಳಾಪುರದಲ್ಲಿ ಲಾರಿಗೆ ಟಾಟಾ ಸುಮೋ ಡಿಕ್ಕಿಯಾಗಿ ಸುಮೋದಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿವೆ. ಮತ್ತೊಂದೆಡೆ ತುಮಕೂರಿನಲ್ಲಿ ಬೈಕ್ಗೆ ಹಿಂಬದಿಯಿಂದ ಟ್ಯಾಂಕರ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣವೊಂದರ ವಿಚಾರಣೆಯ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ವಿಷಾದ ವ್ಯಕ್ತಪಡಿಸಿದ್ದಾರೆ. ಮುಕ್ತ ನ್ಯಾಯಾಲಯದಲ್ಲಿ ತಾವು ನೀಡಿದ ಹೇಳಿಕೆ ಉದ್ದೇಶಪೂರ್ವಕವಲ್ಲ. ಆದರೂ ತಮ್ಮ ಹೇಳಿಕೆಯಿಂದ ಯಾವುದೇ ವ್ಯಕ್ತಿ, ಸಮಾಜ ಅಥವಾ ಸಮುದಾಯಕ್ಕೆ ನೋವುಂಟಾಗಿದ್ದರೆ ಪ್ರಾಮಾಣಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಪ್ರಕರಣವೊಂದರ ವಿಚಾರಣೆ ವೇಳೆ ಬೆಂಗಳೂರಿನ ಗೋರಿಪಾಳ್ಯ 'ಪಾಕಿಸ್ತಾನ'ದಂತಿದೆ ಎಂದು ಹೇಳಿದ್ದರು. ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್, ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಗೆ ಸೂಚಿಸಿತ್ತು. ಪೂರ್ವಾನುಮತಿ ಪಡೆಯದೇ ನ್ಯಾಯಾಲಯದ ಕಲಾಪಗಳನ್ನು ಲೈವ್ ಸ್ಟ್ರೀಮಿಂಗ್ ಮಾಡುವುದು ಮರು ಪ್ರಸಾರ ಮಾಡುವುದು ಪೋಸ್ಟ್ ಮಾಡುವುದು, ಮಾರ್ಪಾಡು ಮಾಡುವುದಕ್ಕೆ ಹೈಕೋರ್ಟ್ ಕಡಿವಾಣ ಹಾಕಿದೆ.
ಜುಲೈ 16 ರಂದು ಅಂಕೋಲಾದ ಶಿರೂರು ಬಳಿ ಸಂಭವಿಸಿದ್ದ ಗುಡ್ಡ ಕುಸಿತದ ಘಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಎಂಬ ವ್ಯಕ್ತಿಗೆ ಸೇರಿದ ಲಾರಿ ಈಗ ಪತ್ತೆಯಾಗಿದೆ. ಘಟನೆಯಲ್ಲಿ 11 ಜನ ಕೊಚ್ಚಿಹೋಗಿದ್ದರು. 8 ಜನರನ್ನು ಈಗಾಗಲೇ ಪತ್ತೆ ಮಾಡಲಾಗಿದ್ದು, ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ ಮತ್ತು ಜಗನ್ನಾಥ ನಾಯ್ಕ ಎಂಬುವವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಈಗ ಮೂರನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಅರ್ಜುನ್ ಲಾರಿ ಪತ್ತೆಯಾಗಿದೆ. ಗಂಗಾವಳಿ ನದಿಯಲ್ಲಿ ಲಾರಿ ಪತ್ತೆಯಾಗಿದ್ದು, ಲಾರಿ ಮೇಲೆತ್ತುವ ಕಾರ್ಯಾಚರಣೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ.
Advertisement