ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ. ಸಿಎಂ ವಿರುದ್ಧ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಂವಿಧಾನದ ವಿಧಿ ‘17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ‘17 ಎ’ ಅಡಿಯ ಆದೇಶ ಸಮರ್ಪಕವಾಗಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ಎದುರಿಸಲು ಹಿಂಜರಿಯುವುದಿಲ್ಲ. ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಕಾನೂನು ಹೋರಾಟಗಳ ಕುರಿತು ತೀರ್ಮಾನಿಸುತ್ತೇವೆ ಎಂದು ಹೈಕೋರ್ಟ್ ತೀರ್ಪಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಸತ್ಯಕ್ಕೆ ಜಯ ಸಿಗಲಿದೆ. ತನಿಖೆ ಎದುರಿಸಲು ನಾನು ಹಿಂಜರಿಯುವುದಿಲ್ಲ, ಕಾನೂನಿನಡಿಯಲ್ಲಿ ಅಂತಹ ತನಿಖೆಗೆ ಅನುಮತಿ ಇದೆಯೇ ಅಥವಾ ಇಲ್ಲವೇ ಎಂಬುದನ್ನು ನಾನು ತಜ್ಞರನ್ನು ಸಂಪರ್ಕಿಸುತ್ತೇನೆ. ಬಿಜೆಪಿ ಮತ್ತು ಜೆಡಿಎಸ್‌ನ ಈ ಸೇಡಿನ ರಾಜಕಾರಣದ ವಿರುದ್ಧ ನಮ್ಮ ನ್ಯಾಯಾಂಗ ಹೋರಾಟ ಮುಂದುವರಿಯುತ್ತದೆ. ನಾನು ತೀರ್ಪಿನ ಪ್ರತಿಯನ್ನು ಸಂಪೂರ್ಣವಾಗಿ ಓದಿಲ್ಲ. ಅದನ್ನು ಓದಿದ ನಂತರ ಮತ್ತೊಮ್ಮೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಹೈಕೋರ್ಟ್ ತೀರ್ಪಿನ ನಂತರವೂ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಪುಟ ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರೆ, ಸರ್ಕಾರವನ್ನು ಅಸ್ಥಿರಗೊಳಿಸುವ ರಾಜ್ಯಪಾಲರ ಪ್ರಯತ್ನಕ್ಕೆ, ಬಿಜೆಪಿಯ ಷಡ್ಯಂತ್ರಕ್ಕೆ ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ಪಕ್ಷ ಪ್ರತಿಕ್ರಿಯೆ ನೀಡಿದೆ. ಇನ್ನು ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.
ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬಿ.ವೈ ವಿಜಯೇಂದ್ರ , ಸಿದ್ದರಾಮಯ್ಯ ನ್ಯಾಯಾಲಯದ ಆದೇಶ ಪಾಲಿಸಬೇಕು ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದರೆ, ಹೈಕೋರ್ಟ್ ಆದೇಶ ಸತ್ಯಕ್ಕೆ ಸಂದ ಜಯ ಎಂದು ಆರ್.ಅಶೋಕ್ ಹೇಳಿದ್ದಾರೆ.
ಅಕ್ಟೋಬರ್ 21 ರಿಂದ ವಾರಾಂತ್ಯದ ದಿನಗಳಲ್ಲೂ ಉಪನೋಂದಣಿ ಕಚೇರಿ ಕಾರ್ಯನಿರ್ವಹಿಸಲಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ದುಡಿಯುವ ಮಧ್ಯಮ ವರ್ಗದ ಜನ ವಾರದ ದಿನಗಳಲ್ಲಿ ತಮ್ಮ ಕೆಲಸಗಳನ್ನು ಬಿಟ್ಟು ಉಪ ನೋಂದಣಿ ಕಚೇರಿಗಳಿಗೆ ಆಗಮಿಸುವುದು ಕಷ್ಟ. ಹೊರರಾಜ್ಯದಿಂದ ಆಗಮಿಸುವವರಿಗೂ ಅನಾನುಕೂಲ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡನೇ-ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಲ್ಲೂ ಉಪ ನೋಂದಣಿ ಕಚೇರಿಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಮೈಸೂರು ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿರುವ ಸಾಕು ಆನೆಗಳ ಬಳಿ ಫೋಟೋ ಶೂಟ್, ಸೆಲ್ಫೀ, ರೀಲ್ಸ್‌ಗೆ ನಿರ್ಬಂಧ ವಿಧಿಸಲಾಗಿದೆ. ಮೈಸೂರಿನಲ್ಲಿ ದಸರಾ ಆನೆಗಳ ನಡುವಿನ ಕದಾಟದ ಘಟನೆ ಬೆನ್ನಲ್ಲೇ, ಅರಣ್ಯ ಸಚಿವ ಈಶ್ವ್ ಖಂಡ್ರೆ ಈ ಬಗ್ಗೆ ಸೂಚನೆ ನೀಡಿದ್ದು, ಸಾರ್ವಜನಿಕರು ಆನೆಗಳ ಬಳಿ ದಂತ ಹಿಡಿದುಕೊಂಡು ಫೋಟೋ ಶೂಟ್ ಮಾಡಿಸುವುದು, ವಿಡಿಯೋ ಮಾಡುವುದು, ಸೆಲ್ಫೀ ಕ್ಲಿಕ್ಕಿಸುವುದು ಹಾಗೂ ರೀಲ್ಸ್‌ಗೆ ಮುಂದಾಗುವಂತಹ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆಲವರು ಅನೆಯ ದಂತ ಹಿಡಿದು, ಮತ್ತೆ ಕೆಲವರು ಸೊಂಡಿಲು ತಬ್ಬಿಕೊಂಡು ಫೋಟೋ ತೆಗೆಸಿಕೊಂಡಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿತ್ತು.
ಮಲ್ಲೇಶ್ವರದ ಬಿಬಿಎಂಪಿ ಮೈದಾನದ ಗೇಟ್ ಬಿದ್ದು ಬಾಲಕ ಸಾವು ಪ್ರಕರಣದ ಸಂಬಂಧ ಸಹಾಯಕ ಅಭಿಯಂತರ ಟಿ.ಶ್ರೀನಿವಾಸ ರಾಜು ಅವರನ್ನು ಅಮಾನತು ಮಾಡಲಾಗಿದೆ. ಬಿಬಿಎಂಪಿ ಅಡಳಿತ ವಿಭಾಗದ ಉಪ ಆಯುಕ್ತರು ಆದೇಶ ಪ್ರಕಟಿಸಿದ್ದು, ಗೇಟ್‌ನ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸದಿರುವುದು, ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ ಆರೋಪದಡಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
Advertisement