ಮೈಸೂರು: ದಸರಾ ಹಬ್ಬಕ್ಕೆ ಮುನ್ನ ಚಾಮುಂಡಿ ಬೆಟ್ಟದಲ್ಲಿ ನಾಳೆ ಮಹಿಷ ಮಂಡಲೋತ್ಸವ ಆಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನದವರೆಗೂ ನಾಡದೇವತೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಅವಕಾಶವಿರುವುದಿಲ್ಲ. ದಸರಾ ಹಿನ್ನೆಲೆಯಲ್ಲಿ ಸದ್ಯ ಬೆಟ್ಟದ ಮಹಿಷಾಸುರ ಪ್ರತಿಮೆಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದ್ದು, ಬಣ್ಣ ಒಣಗುವ ತನಕ ಪ್ರತಿಮೆಗೆ ಧೂಳು ಅಂಟದಂತೆ ಬಟ್ಟೆ ಹೊದಿಕೆ ಮಾಡಲಾಗಿದೆ.
ಇನ್ನು ಮೈಸೂರು ನಗರದಲ್ಲಿ ಮಹಿಷ ದಸರಾ ಆಚರಣೆ ಮಾಡಲು ಮಹಿಷಾ ದಸರಾ ಆಚರಣೆ ಸಮಿತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರ ಮಧ್ಯೆ ಈಗಾಗಲೇ ಮಹಿಷಾ ದಸರಾಗೆ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತ ಮಹಿಷ ಮಂಡಲೋತ್ಸವ ಆಚರಣೆ ವಿಚಾರವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, ಯಾರು ಬೇಕಾದರೂ, ಯಾವ ತೊಂದರೆಯಾಗದಂತೆ ಅವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು. ಆದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂದು ಹೇಳುವ ಮೂಲಕ ಮಹಿಷ ದಸರಾ ಆಚರಣೆಗೆ ಪರೋಕ್ಷವಾಗಿ ಮಹದೇವಪ್ಪ ಒಪ್ಪಿಗೆ ಸೂಚಿಸಿದ್ದಾರೆ.
ನಿಷೇಧಾಜ್ಞೆ ಜಾರಿ: ಚಾಮುಂಡಿ ಬೆಟ್ಟ ಸೇರಿದಂತೆ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂದು ಮಧ್ಯರಾತ್ರಿ 12 ಗಂಟೆಯಿಂದೆ ಸೆಪ್ಟೆಂಬರ್ 30ರ ಬೆಳಗ್ಗೆ 6 ಗಂಟೆಯವರೆಗೆ ಕಲಂ 163 ಬಿ.ಎನ್.ಎಸ್.ಎಸ್ ಅಡಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಸಭೆ ಸಮಾರಂಭ, ರ್ಯಾಲಿ ಹಾಗೂ ಮೆರವಣಿಗೆಗೆ ನಿಷೇಧ ವಿಧಿಸಲಾಗಿದ್ದು ಟೌನ್ ಹಾಲ್ ಒಳ ಆವರಣ ಹೊರತುಪಡಿಸಿ ಉಳಿದೆಡೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
Advertisement