ವಿರೋಧ, ನಿಷೇಧಾಜ್ಞೆಯ ಹೊರತಾಗಿಯೂ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಗಿದೆ. ಮೈಸೂರಿನ ಪುರಭವನದಲ್ಲಿ ಮಹಿಷನ ಕಂಚಿನ ಮೂರ್ತಿಗೆ ಯೋಗೇಶ್ ಮಾಸ್ಟರ್ ಪುಷ್ಪಾರ್ಚನೆ ಮಾಡುವ ಮೂಲಕ ಮಹಿಷ ದಸರಾಗೆ ಚಾಲನೆ ನೀಡಿದ್ದಾರೆ. ಟೌನ್ ಹಾಲ್ ಹೊರತುಪಡಿಸಿ ಮೈಸೂರಲ್ಲಿ ಮಹಿಷ ಆಚರಣೆಗೆ ನಿಷೇಧಜ್ಞೆ ಹೇರಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿರುವ ಪ್ರೊ.ಕೆ ಎಸ್.ಭಗವಾನ್ ದೇವಸ್ಥಾನಗಳನ್ನು ಕಟ್ಟುವುದು ಶೂದ್ರರು. ಆದರೆ ದೇವಸ್ಥಾನದ ಒಳಗೆ ಇರೋರು ಬ್ರಾಹ್ಮಣರು. ಮಾನ ಮಾರ್ಯಾದೆ ಇದ್ದರೆ ಶೂದ್ರರು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದಾರೆ. ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಅನ್ನುವುದಿಲ್ಲ ಅವರನ್ನು ಶೂದ್ರರು ಎಂದು ಹೇಳುತ್ತಾರೆ. ದೇವಸ್ಥಾಕ್ಕೆ ಹೋದರೆ ಏನು ಆಗಲ್ಲ ಎಂದು ಹೇಳಿದ್ದಾರೆ.
ದಸರಾಗೆ ಸಜ್ಜಾಗುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪೊಲೀಸರು ಪಾರ್ಟಿಯಲ್ಲಿ ತೊಡಗಿದ್ದ 50 ಮಂದಿಯನ್ನು ಬಂಧಿಸಿದ್ದಾರೆ. ಕೆಆರ್‌ಎಸ್‌ನ ಹಿನ್ನೀರಿನ ಬಳಿ ಅನಧಿಕೃತವಾಗಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಮಾಹಿತಿ ತಿಳಿದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡುತ್ತಿದ್ದಂತೆ ಮದ್ಯದ ನಶೆಯಲ್ಲಿ ತೂರಾಡುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಿರ್ಬಂಧಿತ ಪ್ರದೇಶವಾದ ಇಲ್ಲಿ ಅನಧಿಕೃತವಾಗಿ ಈ ಪಾರ್ಟಿ ಆಯೋಜಿಸಿ ಯುವಕ-ಯುವತಿಯರನ್ನು ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನಿಸಲಾಗಿತ್ತು. ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಮೀನಿನಲ್ಲಿ ಈ ಪಾರ್ಟಿ ಆಯೋಜಿಸಲಾಗಿತ್ತು ಜೋರು ಧ್ವನಿಯನ್ನು ಆಲಿಸಿದ ಅಕ್ಕಪಕ್ಕದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ಆರೋಪ ಪ್ರತ್ಯಾರೋಪಗಳು ತೀವ್ರಗೊಂಡಿದೆ. ಲೋಕಾಯುಕ್ತ ವಿಶೇಷ ತನಿಖಾ ದಳದ ಐಜಿಪಿ ಎಂ. ಚಂದ್ರಶೇಖರ್ ಭ್ರಷ್ಟ ಅಧಿಕಾರಿ ಆಗಿದ್ದು, ಇಂತಹ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ತನಿಖೆ ಮಾಡಿಸುತ್ತಿದೆ ಎಂದು ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದರು. ಚಂದ್ರಶೇಖರ್ ಅವರ ಪತ್ನಿ ಹೆಸರಿನಲ್ಲಿ 38 ಮಹಡಿಯ ವಾಣಿಜ್ಯ ಕಟ್ಟಡ ಕಟ್ಟುತ್ತಿದ್ದಾರೆ. ಅದು ರಾಜಕಾಲುವೆ ಮೇಲೆ ಕಟ್ಟಡ ಕಟ್ಟುತ್ತಿದ್ದಾರೆ. ಅಲ್ಲದೇ ಕೆರೆಯನ್ನು ಕೂಡಾ ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದರು.
ಲೋಕಾಯುಕ್ತದ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದ ಹಿನ್ನೆಲೆಯಲ್ಲಿ ತಮ್ಮ ಸಿಬ್ಬಂದಿಗಳಿಗೆ ಪತ್ರ ಬರೆದಿರುವ ಎಡಿಜಿಪಿ ಚಂದ್ರಶೇಖರ್, ಹಂದಿಗಳ ಜೊತೆ ಜಗಳ ಮಾಡಿದರೆ ನಾವು ಕೊಳಕಾಗುತ್ತೇವೆ ಕುಮಾರಸ್ವಾಮಿ ನನ್ನ ಮೇಲೆ ಸಾಕಷ್ಟ ಆರೋಪಗಳನ್ನು ಮಾಡಿದ್ದಾರೆ.ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸೋಣಾ. ಎಲ್ಲಾ ಬಾಹ್ಯ ಪ್ರಭಾವದಿಂದ ನಿಮ್ಮನ್ನು ರಕ್ಷಿಸುತ್ತೇನೆ ಎಂದು ಎಸ್ ಐಟಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ "ಹಂದಿ" ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಸಿದ್ದಾರೆ.
ಜಾತಿ ಗಣತಿ ವರದಿಯನ್ನು ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ನನ್ನ ಕೈ ಸೇರಿದೆ. ನಾನು ಇನ್ನೂ ಅದನ್ನು ಸಂಪೂರ್ಣವಾಗಿ ನೋಡಿಲ್ಲ. ಮುಂದಿನ ದಿನಗಳಲ್ಲಿ ಅದನ್ನು ಸಂಪುಟ ಸಭೆಯಲ್ಲಿ ಇಟ್ಟು ಜಾರಿಗೆ ತರುತ್ತೇನೆ. ಜಾತಿ ಗಣತಿ ಜಾರಿ ನಮ್ಮ ಪಕ್ಷದ ಅಜೆಂಡಾ ಆಗಿದೆ. ಹೀಗಾಗಿ ಜಾರಿ ಮಾಡಿಯೇ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.
ಬೀದರ್ ನ ನ್ಯೂಟೌನ್ ಠಾಣೆ ಕಾನ್ಸ್ಟೇಬಲ್ ಧನರಾಜ್ ಎಂಬಾತ ಮಹಿಳಾ ಪಿಎಸ್ಐ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಗ್ರಾಮ ಆಡಳಿತಾಧಿಕಾರಿ ಪರೀಕ್ಷಾ ಹಿನ್ನಲೆ ಬೀದರ್ನ ಮಾದವನಗರದ ಪರೀಕ್ಷಾ ಕೇಂದ್ರದಲ್ಲಿ ಪೊಲೀಸರು ಭದ್ರತಾ ಕರ್ತವ್ಯದಲ್ಲಿದ್ದರು. ಅದರಂತೆ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪಿಸಿ ತಡವಾಗಿ ಬಂದಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದಾರೆ ಎಂದು ಪಿಎಸ್ಐ ಗಂಭೀರ ಆರೋಪ ಮಾಡಿದ್ದಾರೆ.
Advertisement