ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೇ ಮುಡಾ ಕೇಸ್‌ನಲ್ಲಿ ಲೋಕಾಯುಕ್ತ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಸಿದ್ದರಾಮಯ್ಯ ವಿರುದ್ಧ ECIR ದಾಖಲು ಮಾಡಿದೆ. ಅಲ್ಲದೆ ದೂರುದಾರ ಸ್ನೇಹಮಯಿ ಕೃಷ್ಣ ಸಹ ಇಡಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸಿಎಂ ವಿರುದ್ಧ ಯಾವುದೇ ಸಂದರ್ಭದಲ್ಲಿ ಇಡಿ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ. ಈಮಧ್ಯೆ, ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೈಸೂರು ಲೋಕಾಯುಕ್ತ ಎಸ್‌ಪಿ ಟಿ.ಜೆ ಉದೇಶ್ ನೇತೃತ್ವದ ನಾಲ್ಕು ತನಿಖಾ ತಂಡಾ ಶನಿವಾರವೇ ಚೆಕ್‌ಲಿಸ್ಟ್ ರೆಡಿ ಮಾಡಿಕೊಂಡು ತನಿಖೆಗಿಳಿದಿದೆ. ಈ ಸಂಬಂಧ ಬೆಂಗಳೂರಿಗೆ ಆಗಮಿಸಿದ ಉದೇಶ್, ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಜತೆ ಚರ್ಚೆ ನಡೆಸಿದರು. ಮತ್ತೊಂದೆಡೆ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ RTI ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. 2024ರ ಆಗಸ್ಟ್ 21ರಂದು ಲಾವಣ್ಯ ಎಂಬುವರು ಸ್ನೇಹಮಯಿ ಕೃಷ್ಣ ಹಾಗೂ ಇತರರ ವಿರುದ್ಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಹಲ್ಲೆ, ಜೀವ ಬೆದರಿಕೆ ಪ್ರಕರಣ ದಾಖಲಿಸಿದ್ದರು.
ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿ ಆದರ್ಶ ಅಯ್ಯರ್ ಎಂಬುವರು ಬೆಂಗಳೂರಿನ ತಿಲಕ್ ನಗರ ಠಾಣೆಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಕಟೀಲ್ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ, ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಳೀನ್ ಕುಮಾರ್ ಕಟೀಲ್, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಬಿವೈ ವಿಜಯೆಂದ್ರ ಸೇರಿದಂತೆ ಇನ್ನಿತರರಿಗೂ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಕಳೆದ ಆರು ವರ್ಷಗಳಿಂದ ಬೆಂಗಳೂರಿನ ಜಿಗಣಿಯಲ್ಲಿ ನಕಲಿ ಗುರುತಿನೊಂದಿಗೆ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆ ಆತನ ಪತ್ನಿ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ. 2014ರಲ್ಲಿ ದೆಹಲಿಗೆ ಬಂದಿದ್ದ ದಂಪತಿಗಳು ನಂತರ 2018ರಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಬಂಧಿತ ಇನ್ನಿಬ್ಬರು ಆತನ ಸೋದರ ಸಂಬಂಧಿಗಳು ಎಂದು ತಿಳಿದುಬಂದಿದೆ. ಒಂದೇ ಕುಟುಂಬದ ನಾಲ್ವರು ಅಕ್ರಮ ದಾಖಲೆಗಳ ಸಹಾಯದಿಂದ ಇಲ್ಲಿ ಅಕ್ರಮವಾಗಿ ವಾಸವಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡು ಆ ನಾಲ್ವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್ ಅವರು, ಆರೋಪಿಗಳು 10 ವರ್ಷಗಳಿಂದ ಭಾರತದಲ್ಲಿ ನೆಲೆಸಿರುವ ಮಾಹಿತಿ ಲಭ್ಯವಾಗಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಅವರು ಆಧಾರ್ ಕಾರ್ಡ್, ಪಾಸ್ಪೋರ್ಟ್ ಸಹ ಮಾಡಿಸಿಕೊಂಡಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು.
ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಹಾಕಿದ್ದ ನಿರ್ಬಂಧವನ್ನು ಇಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಇದರೊಂದಿಗೆ, ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಜನಾರ್ದನ ರೆಡ್ಡಿಗೆ ಅವಕಾಶ ದೊರೆತಂತಾಗಿದೆ. ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆ ಕಳೆದ ಒಂದೂವರೆ ದಶಕಗಳಿಂದ ತವರು ಜಿಲ್ಲೆಗೆ ಪ್ರವೇಶವಿಲ್ಲದೆ ಗಾಲಿ ಜನಾರ್ದನ ರೆಡ್ಡಿ ವನವಾಸ ಅನುಭವಿಸಿದ್ದರು. ಈ ಬಗ್ಗೆ ಶಾಸಕ ಜನಾರ್ದನ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದು ಭಗವಂತನ ಆಶೀರ್ವಾದದಿಂದ ಕಷ್ಟದ ದಿನಗಳು ಮುಗಿಯುತ್ತಾ ಬರುತ್ತಿವೆ. ಇನ್ಮುಂದೆ ನನ್ನೂರಿನಲ್ಲಿ ನೆಮ್ಮದಿಯಿಂದ ಬದುಕುತ್ತೇನೆ ಎಂದು ಹೇಳಿದರು.
ಉಡುಪಿಯ ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಸಂಬಂಧಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಹೊಸ್ಮಾರುನ ಪಾಜೆಗುಡ್ಡೆ ಬಳಿ ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಸುರೇಶ್ ಆಚಾರ್ಯ ಅವರ ಪತ್ನಿ ಮೀನಾಕ್ಷಿ ಆಚಾರ್ಯ ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಟಾಟಾ ಇನ್ಸ್ಸ್ಟಿಟ್ಯೂಟ್ ಮುಂಭಾಗ BMTC ಬಸ್ ಹರಿದು ಬೈಕ್ ಸವಾರ ಈಶ್ವರ್ ಎಂಬುವರು ಮೃತಪಟ್ಟಿದ್ದು ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement