ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಶಿಶಾ ಕೆಫೆ ಮಾಲೀಕರು ನಿರ್ಧಾರ

ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಹುಕ್ಕಾ ಬಾರ್ ಗಳನ್ನು ನಿಷೇಧಿಸಿದ್ದು, ಇದನ್ನು ಪ್ರಶ್ನಿಸಿ ಬೆಂಗಳೂರು ಮತ್ತು ರಾಜ್ಯಾದ್ಯಂತ ಹುಕ್ಕಾ ಕೆಫೆಗಳ ಮಾಲೀಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯಾದ್ಯಂತ ಹುಕ್ಕಾ ಬಾರ್ ಗಳನ್ನು ನಿಷೇಧಿಸಿದ್ದು, ಇದನ್ನು ಪ್ರಶ್ನಿಸಿ ಬೆಂಗಳೂರು ಮತ್ತು ರಾಜ್ಯಾದ್ಯಂತ ಹುಕ್ಕಾ ಕೆಫೆಗಳ ಮಾಲೀಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಶಿಶಾ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳ ಸಂಘದ ಪ್ರತಿನಿಧಿಗಳು ಅಗತ್ಯವಿರುವ ಎಲ್ಲಾ ಪರವಾನಗಿಗಳನ್ನು ಪಡೆದ ನಂತರ ಕಾರ್ಯನಿರ್ವಹಿಸುತ್ತಿರುವ ಕಾರಣ ಈ ನಿಷೇಧ ಸಮರ್ಥನೀಯವಲ್ಲ ಎಂದು ಹೇಳಿದ್ದಾರೆ.

ಎಲ್ಲಾ ಸಿಗರೇಟ್ ಉತ್ಪನ್ನಗಳಲ್ಲಿ 'ನಿಕೋಟಿನ್' ಇರುತ್ತದೆ ಮತ್ತು ನಿಕೋಟಿನ್ ಅನ್ನು ಉಲ್ಲೇಖಿಸಿ ಹುಕ್ಕಾ ಬಾರ್ ಗಳ ಮೇಲೆ ಮಾತ್ರ ನಿಷೇಧ ಹೇರುವುದು ಸರಿಯಲ್ಲ. ಹುಕ್ಕಾ ಕೆಫೆಗಳಲ್ಲಿ 15,000ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ ಮತ್ತು ನಾವು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

“ಎಲ್ಲಾ ಕಡ್ಡಾಯ ಪರವಾನಗಿಗಳನ್ನು ಹೊಂದಿದ್ದರೂ, ಹುಕ್ಕಾ ಕೆಫೆಗಳನ್ನು ಏಕೆ ನಿಷೇಧಿಸಲಾಗಿದೆ? ಹುಕ್ಕಾದಲ್ಲಿ ನಿಕೋಟಿನ್ ಇದೆ ಎಂಬ ಕಾರಣಕ್ಕೆ ಅವರು ನಿಷೇಧ ಹೇರಿದ್ದರೆ, ನಿಕೋಟಿನ್ ಇರುವ ಸಿಗರೇಟಿನ ಮೇಲೂ ನಿಷೇಧ ಹೇರಬೇಕು’ ಎಂದು ಸಂಘದ ಉಪಾಧ್ಯಕ್ಷ ಆದಂ ಖಾನ್ ಒತ್ತಾಯಿಸಿದ್ದಾರೆ.

ಶಾಸನಬದ್ಧ ಎಚ್ಚರಿಕೆಗಳ ಹೊರತಾಗಿಯೂ ಜನರು ಸಿಗರೇಟ್ ಮತ್ತು ಮದ್ಯವನ್ನು ಸೇವಿಸುತ್ತಿದ್ದಾರೆ. ಅದರಂತೆ ಹುಕ್ಕಾವನ್ನು ಸೇವಿಸಲು ಬಯಸುವವರಿಗೂ ಅನುಮತಿ ನೀಡಬೇಕು. ಇದಲ್ಲದೆ, ಯುಎಸ್ ಮತ್ತು ದುಬೈನಲ್ಲಿ ಹುಕ್ಕಾ ಕಾನೂನುಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

''ರಾಜ್ಯದಾದ್ಯಂತ 600ಕ್ಕೂ ಹೆಚ್ಚು ಹುಕ್ಕಾ ಬಾರ್‌ಗಳಿವೆ. ಕಳೆದ ಅಕ್ಟೋಬರ್‌ನಲ್ಲಿ ಮಡ್‌ಪೈಪ್ ಕೆಫೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ, ನಗರ ಮತ್ತು ರಾಜ್ಯದಲ್ಲಿ ಹುಕ್ಕಾ ಕೆಫೆಗಳು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿಲ್ಲ. ಬೆಂಗಳೂರಿನಲ್ಲಿ 15,000 ಕ್ಕೂ ಹೆಚ್ಚು ಜನ ಹುಕ್ಕಾ ಕೆಫೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ಹುಕ್ಕಾ ಸೇವೆಯನ್ನು ನಿಷೇಧಿಸಿರುವುದರಿಂದ ಬಾಡಿಗೆ ಮತ್ತು ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಖಾನ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com