ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಅವರ ಸೇವಾ ಅವಧಿ ನಾಳೆ(ಜನವರಿ 31)ಗೆ ಮುಕ್ತಾಯವಾಗುತ್ತಿದ್ದು ಇಂದು ಅವರಿಗೆ ಕಚೇರಿಯ ಸಿಬ್ಬಂದಿ ವರ್ಗ ಭಾವಪೂರ್ಣ ವಿದಾಯ ಕೋರಿದರು.
ಡಾ. ಸಿ.ಎನ್. ಮಂಜುನಾಥ್ ಅವರು 2007ರಿಂದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. 2023ರ ಜುಲೈನಲ್ಲಿಯೇ ಅವರ ಸೇವಾವಧಿ ಮುಕ್ತಾಯಗೊಂಡಿತ್ತು. ಆಸ್ಪತ್ರೆಯ ಸಿಬ್ಬಂದಿ ಮತ್ತು ಹಲವಾರು ಗಣ್ಯರು ಅವರ ಸೇವೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿದ್ದರಿಂದ ಸರ್ಕಾರ ಅವರ ಸೇವಾ ಅವಧಿಯನ್ನು ವಿಸ್ತರಿಸಿತ್ತು.
ಈಗ ಅವಧಿ ಮುಕ್ತಾಯಗೊಂಡಿದ್ದು, ನಿವೃತ್ತರಾಗಿದ್ದಾರೆ.ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈಗಾಗಲೇ 21 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ 11 ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.ನಾಳೆಯೇ ಮುಖ್ಯಮಂತ್ರಿಗಳು 11 ವೈದ್ಯರ ಪೈಕಿ ಒಬ್ಬರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಿದ್ದಾರೆ. ಈಗಾಗಲೇ ಮೈಸೂರು ಜಯದೇವ ಆಸ್ಪತ್ರೆಯ ಎಂ.ಎಸ್ ಸದಾನಂದ ಹಾಗೂ ಡಾ. ದಿನೇಶ್ ಹೆಸರು ಮುಂಚೂಣಿಯಲ್ಲಿವೆ.
75 ಲಕ್ಷ ಜನರಿಗೆ ಚಿಕಿತ್ಸೆ: ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಇತ್ತು. ಅದು 100 ಕ್ಕೆ 100 ಆಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ. ನಾನು ಇಲ್ಲಿಗೆ ಬಂದಾಗ 300 ಹಾಸಿಗೆ ಇತ್ತು, ಈಗ 2,000 ಸಾವಿರ ಹಾಸಿಗೆಗಳಿವೆ. 3,500 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಳೆದ 16 ವರ್ಷಗಳಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. 8 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಇಷ್ಟು ವರ್ಷಗಳ ಸೇವೆ ಸಂತೋಷ ತಂದಿದೆ ಎಂದು ಹೇಳಿ ಭಾವುಕರಾದರು.
Advertisement