ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ಬಿಬಿಎಂಪಿ ಡಬಲ್ ಶಾಕ್ ನೀಡಿದೆ. ವಸತಿ ಮತ್ತು ವಸತಿ ರಹಿತ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಬಿಬಿಎಂಪಿ ಮಂಗಳವಾರ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಅಧಿಸೂಚನೆ ಪ್ರಕಟವಾದ ಏಳು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಆಹ್ವಾನಿಸಿದೆ. ಇದೀಗ ಪಾರ್ಕಿಂಗ್ಗೆ ಚದರ ಅಡಿ ಲೆಕ್ಕದಲ್ಲಿ ಪಾಲಿಕೆ ದರ ನಿಗದಿ ಮಾಡಿದೆ. ಇನ್ನು ಮನೆ, ಅಂಗಡಿ ಮುಂಗಟ್ಟಿನ ಕಸಕ್ಕೂ ತೆರಿಗೆ ಪಾವತಿ ಮಾಡಬೇಕು ಎಂದು ಬೆಂಗಳೂರು ಮಹಾನಗರ ಪಾಲಿಕೆ ಸೂಚಿಸಿದೆ. ಈ ವಿಚಾರವಾಗಿ ಬಿಬಿಎಂಪಿ ಬಜೆಟ್ನಲ್ಲೂ ಘೋಷಣೆ ಮಾಡಲಾಗಿದೆ. ಈ ಮೂಲಕ 600 ಕೋಟಿ ರೂಪಾಯಿ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಗುರಿ ಹಾಕಿಕೊಂಡಿದೆ. ಅಂಗಡಿ–ಮುಂಗಟ್ಟುಗಳಲ್ಲಿ ಪ್ರತಿ ಕೆಜಿ ಕಸಕ್ಕೆ 12 ರೂಪಾಯಿ ತೆರಿಗೆ ವಸೂಲಿಗೆ ಪಾಲಿಕೆ ಸಜ್ಜಾಗಿದೆ. ಪ್ರತಿ ತಿಂಗಳು ಕಸ ಸಂಗ್ರಹ ಹಾಗೂ ವಿಲೇವಾರಿ ವೆಚ್ಚ ಹೆಚ್ಚಾಗುತ್ತಿದ್ದು, ಈ ಕಾರಣದಿಂದ ತೆರಿಗೆ ವಿಧಿಸಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.
ಸಿಎಂ ಸಿದ್ದರಾಮಯ್ಯ ದೀರ್ಘ ಕಾಲದ ನಂತರ, ನಾಳೆ ದೆಹಲಿಗೆ ತೆರಳುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯ ವಿಧಾನಪರಿಷತ್‌ನಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ. ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಹಲವರನ್ನು ಭೇಟಿ ಮಾಡಲಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ಧರಾಮಯ್ಯ ಅವರನ್ನು ಅವರ ಆರೋಗ್ಯ ವಿಚಾರಿಸಲು ಮುಖ್ಯಮಂತ್ರಿಗಳ ನಿವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಪ್ರಾಥಮಿಕವಾಗಿ ಪರಿಷ್ತನ ನಾಮನಿರ್ದೇಶನದ ಬಗ್ಗೆ ಚರ್ಚೆಗಳು ನಡೆದಿದ್ದವು.
ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಅನೇಕ ಆಕ್ರಮಣಕಾರರು ಪ್ರಯತ್ನಿಸುತ್ತಿದ್ದರೂ, ದೇಶದ ಸಂತರು ಸಂಸ್ಕೃತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಸಿದ್ದಗಂಗಾ ಮಠದಲ್ಲಿ ನಡೆದ ಶ್ರೀ ಶಿವಕುಮಾರ ಸ್ವಾಮೀಜಿಯವರ 118 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಸಿಂಗ್, ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡುವಲ್ಲಿ ಸ್ವಾಮೀಜಿಯವರ ಕೊಡುಗೆಯನ್ನು ಸ್ಮರಿಸಿದರು. ಸಂಸ್ಕೃತದ ಪ್ರಚಾರಕ್ಕಾಗಿ ಅವರು ಮಠದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವ ವಿಷಯವು ಶ್ರೀಗಳ ಜನ್ಮ ದಿನಾಚರಣೆಯಲ್ಲಿ ಮುನ್ನೆಲೆಗೆ ಬಂದಿದ್ದು. ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಿಂಗ್ ಅವರನ್ನು ಈ ಬೇಡಿಕೆಯನ್ನು ಗಮನಿಸುವಂತೆ ಸಲಹೆ ನೀಡಿದರು.
ಕ್ರಿಕೆಟ್ ಪ್ರಿಯರಿಗೆ ಅನುಕೂಲವಾಗುವ ನಿರ್ಧಾರವನ್ನು BMRCL ಕೈಗೊಂಡಿದೆ. ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಐಪಿಎಲ್ ಪಂದ್ಯಗಳಿಗೆ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸಿದೆ. ಬೆಂಗಳೂರಿನಲ್ಲಿ 7 ಮ್ಯಾಚ್‌ಗಳು ನಡೆಯಲಿವೆ. ಈ ಪಂದ್ಯಗಳು ನಡೆಯುವ ದಿನ ಮೆಟ್ರೋ ಸಂಚಾರವನ್ನು ರಾತ್ರಿ 12:30ರ ವರೆಗೆ ವಿಸ್ತರಿಸಲಾಗಿದೆ. 4 ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 12:30ಕ್ಕೆ ಕೊನೆ ರೈಲು ಹೊರಡಲಿದೆ, "ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ರಾತ್ರಿ 1.15 ಕ್ಕೆ ಹೊರಡಲಿದೆ" ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ವಿಧಾನಸಭೆಯ 18 ಸದಸ್ಯರನ್ನು ಅಮಾನತು ಮಾಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಕೋರಿ ಸ್ಪೀಕರ್ ಯು.ಟಿ.ಖಾದರ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದಿದ್ದಾರೆ. ಮಾರ್ಚ್ 21ರಂದು ವಿಧಾನಸಭೆ ಅಧಿವೇಶನದ ವೇಳೆ ಸದನದಲ್ಲಿ ಹನಿಟ್ರ್ಯಾಪ್ ಹಾಗೂ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ವಿಚಾರದ ಚರ್ಚೆಯು ವಿಕೋಪಕ್ಕೆ ತಿರುಗಿದಾಗ ಪ್ರತಿಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಸುತ್ತ ನಿಂತು ಪ್ರತಿಭಟನೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ತಾವು 18 ಸದಸ್ಯರನ್ನು ಅಮಾನತುಗೊಳಿಸಿದ್ದೀರಿ. ಮಾರ್ಚ್ 21ರ ಘಟನೆ ಉದ್ದೇಶಪೂರ್ವಕವಾದುದಲ್ಲ. ನಮ್ಮ ಶಾಸಕರನ್ನು ಕರೆದು ವಿವರಣೆ ಕೇಳಿದ್ದರೆ ನಾವು ಖಂಡಿತ ಸ್ಪಷ್ಟೀಕರಣ ಕೊಡುತ್ತಿದ್ದೆವು. ಈ ನಿರ್ಬಂಧಗಳನ್ನು ಸಡಿಲಿಸಿ, ಕೆಲಸ ಮಾಡಲು ಶಾಸಕರಿಗೆ ಅವಕಾಶ ಕೊಡಬೇಕೆಂದು ಆಶೋಕ್ ಮನವಿ ಮಾಡಿದ್ದಾರೆ.
Advertisement