ಕುಡಿಯುವ ನೀರಿಗೆ ಮೊದಲ ಆದ್ಯತೆ; ಬಿಜೆಪಿಯವರು ರೈತ ವಿರೋಧಿಗಳು: ಡಿ.ಕೆ ಶಿವಕುಮಾರ್ ಆಕ್ರೋಶ

ನಾವು ವಿದ್ಯುತ್ ಬೆಲೆ ಕಡಿಮೆ ಮಾಡಿದಾಗ ಅವರು ಮಾತನಾಡಲಿಲ್ಲ. ಅವರಿಗೆ ಜನರ ಮೇಲೆ ಕಾಳಜಿ ಇದ್ದರೆ, ಪೆಟ್ರೋಲ್, ಡೀಸೆಲ್, ಜಾನುವಾರುಗಳಿಗೆ ಹಾಕುವ ಬೂಸಾ ದರಗಳನ್ನು ಇಳಿಸಲಿ.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ರೈತ ವಿರೋಧಿಗಳು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ದರ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರುವ ಹೋರಾಟದ ಬಗ್ಗೆ ಕೇಳಿದಾಗ, "ನಾವು ವಿದ್ಯುತ್ ಬೆಲೆ ಕಡಿಮೆ ಮಾಡಿದಾಗ ಅವರು ಮಾತನಾಡಲಿಲ್ಲ. ಅವರಿಗೆ ಜನರ ಮೇಲೆ ಕಾಳಜಿ ಇದ್ದರೆ, ಪೆಟ್ರೋಲ್, ಡೀಸೆಲ್, ಜಾನುವಾರುಗಳಿಗೆ ಹಾಕುವ ಬೂಸಾ ದರಗಳನ್ನು ಇಳಿಸಲಿ. ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಹಾಲು, ಮೊಸರಿನ ಬೆಲೆ ಕಡಿಮೆ ಇದೆ" ಎಂದು ಹೇಳಿದರು.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬೆಲೆಯನ್ನು ಪ್ರತಿ ಲೀಟರ್ ಗೆ ಕನಿಷ್ಠ 1 ಪೈಸೆಯಷ್ಟು ಏರಿಕೆ ಮಾಡಲೇಬೇಕಾಗಿದೆ. ಬಡವರಿಗೆ ಹೊರೆಯಾಗದಂತೆ ನೀರಿನ ದರ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ. ಜಲ ಮಂಡಳಿ ವಾರ್ಷಿಕವಾಗಿ 1 ಸಾವಿರ ಕೋಟಿ ನಷ್ಟ ಅನುಭವಿಸುತ್ತಿದ್ದು, ಮುಂದಿನ ಹಂತಗಳ ಯೋಜನೆ ಕೈಗೆತ್ತಿಗೊಳ್ಳಬೇಕಾದರೆ ದರ ಏರಿಕೆ ಅನಿವಾರ್ಯ. ಇದಕ್ಕೂ ಮುನ್ನ ಜನರಿಗೂ ನೀರಿನ ಪ್ರಾಮುಖ್ಯತೆ ಅರಿಯುವಂತೆ ಮಾಡಬೇಕು" ಎಂದು ತಿಳಿಸಿದರು.

ಇನ್ನು ಕಸದ ವಿಚಾರವಾಗಿ ಹೇಳುವುದಾದರೆ, ಕೇಂದ್ರ ಬಿಜೆಪಿ ಸರ್ಕಾರ ಕಾನೂನು ಮಾಡಿದ್ದು, ಬಿಜೆಪಿ ಸರ್ಕಾರ 2022ರಲ್ಲೇ ದುಬಾರಿ ಸೆಸ್ ವಿಧಿಸಿದ್ದರು. ನಾವು ಅದನ್ನು ಕಡಿಮೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜಾಹೀರಾತು ಹಾಗೂ ಪತ್ರಿಕಾ ಪ್ರಕಟಣೆ ಹೊರಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜನರ ನೋವು ನಮಗೂ ಅರಿವಾಗುತ್ತದೆ. ಇದರಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ" ಎಂದು ತಿಳಿಸಿದರು.

ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, "ಅವರು ದಿನ ನಿತ್ಯ ಟೀಕೆ ಮಾಡಲಿ. ನಾವು ಜನರಿಗೆ ಉತ್ತಮ ಆಡಳಿತ ನೀಡಬೇಕು. ಕುಮಾರಸ್ವಾಮಿ ಅವರ ಸಹೋದರ ಹಾಲು ಒಕ್ಕೂಟಗಳ ಅಧ್ಯಕ್ಷರು. ಅವರಿಗೂ ಬೆಲೆ ಕಡಿಮೆ ಮಾಡುವ ಅವಕಾಶವಿದೆ. ಅವರು ಹಾಸನದಲ್ಲಿ ರೂ.4 ಕಡಿಮೆ ಮಾಡಿ ಹಾಲು ನೀಡಲಿ ನೋಡೋಣ. ರೈತರು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ನೀಡಲು ಈ ನಿರ್ಧಾರ ಮಾಡಿದ್ದೇವೆ" ಎಂದು ತಿಳಿಸಿದರು.

ಬೇಸಿಗೆ ಸಮಯದಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುವುದು ನಮ್ಮ ಮೊದಲ ಆದ್ಯತೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಪ್ರತಿನಿಧಿಗಳ ನಿಯೋಗವು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಬುಧವಾರ ಭೇಟಿ ಮಾಡಿದರು. ಈ ವೇಳೆ ನಾರಾಯಣಪುರ ಬಸವಸಾಗರ ಜಲಾಶಯದ ಬಲದಂಡೆ ಹಾಗೂ ಎಡದಂಡೆಯಿಂದ ಏ.15ರವರೆಗೆ ಬೆಳೆಗಳಿಗೆ ನೀರು ಹರಿಸಬೇಕು ಎಂದು ಮನವಿ ಸಲ್ಲಿಸಿದರು.

ಸಿದ್ದರಾಮಯ್ಯ ಅವರು ಮಹಾರಾಷ್ಟ್ರ ಸಿಎಂಗೆ ಪತ್ರ ಬರೆದಿದ್ದಾರೆ. ಸಚಿವರು, ಶಾಸಕರು, ರೈತಸಂಘದ ಪ್ರತಿನಿಧಿಗಳು ಬಂದು ಬೆಳೆಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ. ಎರಡನೇ ಬೆಳೆ ಹಾಕಬೇಡಿ ಎಂದರೂ ಈ ಭಾಗದ ರೈತರು ಬೆಳೆ ಹಾಕಿಕೊಂಡಿದ್ದಾರೆ. ಈಗ ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಯ ಜನ ಕಾಲುವೆಗೆ ನೀರು ಹರಿಸುವಂತೆ ಗಲಾಟೆ ಮಾಡುತ್ತಿದ್ದಾರೆ. ಹೀಗಾಗಿ ಮಹಾರಾಷ್ಟ್ರದವರಿಗೆ ಪತ್ರ ಬರೆಯಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತೇವೆ. ಈ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡಬೇಕು" ಎಂದು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com