
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತ ಡಿ ಬಿ ನಟೇಶ್ ಹೊರತುಪಡಿಸಿ ಉಳಿದ ಎಲ್ಲಾ ಆರೋಪಿಗಳ ವಿರುದ್ಧ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್ ಬುಧವಾರ ಜಾರಿ ನಿರ್ದೇಶನಾಲಯಕ್ಕೆ(ಇಡಿ) ಅನುಮತಿ ನೀಡಿದೆ.
ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್ ಅವರಿಗೆ ನೀಡಲಾಗಿದ್ದ ಸಮನ್ಸ್ ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ಕೋರಿ ಇಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಕಾನೂನು ಪ್ರಕಾರ ಇತರ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲು ಇಡಿಗೆ ಅರ್ಹತೆ ಇದೆ ಎಂದು ತೀರ್ಪು ನೀಡಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರಿಗೆ ಇಡಿ ತನಿಖೆಯ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ, ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಹೇಳಿಕೆ, ಅವರ ನಿವಾಸದಲ್ಲಿ ಶೋಧನೆ, ದಾಖಲೆ ಜಪ್ತಿ ಆದೇಶ ರದ್ದುಪಡಿಸಿತ್ತು. ಈ ಆದೇಶ ಆಧರಿಸಿ ಸಿಎಂ ಪತ್ನಿ ಪಾರ್ವತಿ ಹಾಗೂ ಭೈರತಿ ಸುರೇಶ್ ಅವರ ವಿರುದ್ಧದ ಇಡಿ ಸಮನ್ಸ್ ಅನ್ನು ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಹೀಗಾಗಿ ಈ ಆದೇಶ ಪ್ರಶ್ನಿಸಿ ಇಡಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಇಡಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದೆ. ಆದರೆ ಡಿ.ಬಿ.ನಟೇಶ್ ಹೇಳಿಕೆ, ಅವರಿಂದ ಸಿಕ್ಕ ದಾಖಲೆ ಆಧರಿಸಿ ಇತರೆ ಆರೋಪಿಗಳ ವಿರುದ್ಧ ಇಡಿ ತನಿಖೆ ನಡೆಸಬಹುದೆಂದು ಹೈಕೋರ್ಟ್ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಬಿ ಎಂ, ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಿ ಮಾರಾಟ ಮಾಡಿದ ದೇವರಾಜು ಅವರು ಆರೋಪಿಗಳಾಗಿದ್ದಾರೆ.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ, ಸಿದ್ದರಾಮಯ್ಯ ಅವರ ಪತ್ನಿಗೆ ಮೈಸೂರಿನ ದುಬಾರಿ ಪ್ರದೇಶದಲ್ಲಿ ಪರಿಹಾರ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
Advertisement