
ಬೆಂಗಳೂರು: ಐತಿಹಾಸಿಕ ಪ್ರಸಿದ್ಧ ಬೆಂಗಳೂರು ಕರಗ ಉತ್ಸವ ನಾಳೆಯಿಂದ ಜರುಗಲಿದೆ. ಧರ್ಮರಾಯ ದೇವಸ್ಥಾನದಲ್ಲಿ ಏಪ್ರಿಲ್ 4 ರಿಂದ 14ರ ವರೆಗೂ ಕರಗ ಉತ್ಸವ ನಡೆಯಲಿದೆ.
ನಾಳೆ ರಾತ್ರಿ 10 ಗಂಟೆಗೆ ಕರಗ ಆಚರಣೆಗಳು ಆರಂಭವಾಗಲಿವೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಬಾರಿ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಕಳೆದ 14 ವರ್ಷಗಳಿಂದ ಜ್ಞಾನೇಂದ್ರ ಕರಗ ಹೊರುತ್ತಿದ್ದಾರೆ.
ಈ ಬಾರಿ ಕರಗದಲ್ಲಿ 20 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಏಪ್ರಿಲ್ 4 ರಂದು ರಥೋತ್ಸವ ಮತ್ತು ಧ್ವಜಾರೋಹಣ ನಡೆಯಲಿದೆ. ಏ.5 ರಿಂದ ಏ.8 ರ ತನಕ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಇರಲಿದೆ. ಏ.9 ರಂದು ಆರತಿ ದೀಪಗಳು, ಏ.10 ರ ಗುರುವಾರ ಹಸಿ ಕರಗ, ಏ.11 ರಂದು ಹೊಂಗಲು ಸೇವೆ, ಏ.12 ಶನಿವಾರದಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ, ಏ.13 ರಂದು ಪುರಾಣ ಪ್ರವಚನ ಮತ್ತು ದೇವಸ್ಥಾನದಲ್ಲಿ ಗಾವು ಶಾಂತಿ, ಏ.14 ರ ಸೋಮವಾರ ವಸಂತೋತ್ಸವ ಧ್ವಜಾರೋಹಣ ಇರಲಿದೆ.
ಬೆಂಗಳೂರು ಕರಗ ಹಿನ್ನೆಲೆಯಲ್ಲಿ ಧರ್ಮರಾಯ ದೇವಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಬೆಳಗ್ಗೆಯಿಂದಲೇ ದೇವಾಲಯದ ಸ್ವಚ್ಛತಾ ಕಾರ್ಯ ನಡೆದಿದೆ. ಸಿಬ್ಬಂದಿಯು ದೇವಾಲಯ, ರಥ ಸೇರಿದಂತೆ ಸಂಪೂರ್ಣ ಶುಚಿಗೊಳಿಸುತ್ತಿದ್ದಾರೆ. ಕರಗ ಆಚರಣೆಗಳು ನಾಳೆ ರಾತ್ರಿ 10 ಗಂಟೆಗೆ ಶುರುವಾಗಲಿವೆ.
Advertisement