
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಎನ್ನಲಾದ ಶೇ.40 ರಷ್ಟು ಕಮಿಷನ್ ಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ತನಿಖಾ ಆಯೋಗಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ ಎಂಬ ವರದಿಗಳ ನಡುವೆ ಕೇವಲ ಮಧ್ಯಂತರ ವರದಿ ಮಾತ್ರ ಸಲ್ಲಿಸಲಾಗಿದೆ. ಅಂತಿಮ ವರದಿಯಲ್ಲಿ ಹೆಚ್ಚಿನ ಸಾಕ್ಷ್ಯಗಳಿರಬಹುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಗುರುವಾರ ತಿಳಿಸಿದ್ದಾರೆ.
ಈ ಸಂಬಂಧ ರಚಿಸಲಾಗಿದ್ದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಆಯೋಗವು ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 20,000 ಪುಟಗಳ ವರದಿಯನ್ನು ಸಲ್ಲಿಸಿತ್ತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಪರಮೇಶ್ವರ್, ಇಲ್ಲಿಯವರೆಗೂ ಅವರು ಸಂಗ್ರಹಿಸಿರುವ ಸಾಕ್ಷ್ಯಧಾರ ಆಧಾರದ ಮೇಲೆ ವರದಿ ಸಲ್ಲಿಸಿರಬಹುದು. ಆದರೆ ಇನ್ನೂ ಹೆಚ್ಚಿನ ಸಾಕ್ಷ್ಯಾಧಾರಗಳ ಅಗತ್ಯವಿರಬಹುದು. ಅಂತಿಮ ವರದಿಯಲ್ಲಿ ಹೆಚ್ಚಿನ ಸಾಕ್ಷ್ಯಧಾರಗಳನ್ನು ಅವರು ಸಲ್ಲಿಸಬಹುದು. ಇದು ಕೇವಲ ಮಧ್ಯಂತರ ವರದಿಯಾಗಿದೆ ಎಂದು ತಿಳಿಸಿದರು.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜುಲೈ 26, 2019ರಿಂದ ಮಾರ್ಚ್ 31, 2023 ವರೆಗೆ ನಡೆದಿದ್ದ ಕಾಮಗಾರಿಗಳಲ್ಲಿ ಶೇ. 40 ರಷ್ಟು ಕಮಿಷನ್ ಆರೋಪ ಕೇಳಿಬಂದಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ವಿರುದ್ಧದ ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಮುಂದುವರಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಕರ್ನಾಟಕ ಹೈಕೋರ್ಟ್ ಬುಧವಾರ ಅನುಮತಿ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, 'ಅಂತಿಮವಾಗಿ, ಹೈಕೋರ್ಟ್ ಇಡಿಗೆ ಅನುಮತಿ ನೀಡಿದರೆ, ಅವರೇ ತನಿಖೆ ನಡೆಸಲಿ ಎಂದರು.
Advertisement