
ಬೆಂಗಳೂರು: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ವಿಚಾರದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಸರಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪತ್ರ ಬರೆದು ಆಕ್ರೋಶ ಹೊರಹಾಕಿದ್ದಾರೆ.
ಗದಗದ ಗ್ರಾಮೀಣಾಭಿವೃದ್ದಿ ವಿವಿ ಕುಲಪತಿ ನೇಮಕ ಅಧಿಕಾರವನ್ನು ರಾಜ್ಯಪಾಲರ ಬದಲಿಗೆ ಸಿಎಂಗೆ ನೀಡುವ ಸಂಬಂಧ ತಿದ್ದುಪಡಿ ವಿಧೇಯಕ ರೂಪಿಸಲಾಗಿದೆ. ಆದರೆ, ಈ ಕಾನೂನು ತಿದ್ದುಪಡಿ ಬಗ್ಗೆ ಆಕ್ಷೇಪ ಎತ್ತಿರುವ ರಾಜ್ಯಪಾಲರು ಸ್ಪಷ್ಟನೆ ಬಯಸಿ ವಾಪಸ್ ಕಳಿಸಿದ್ದು, ಇನ್ನೂ ಒಪ್ಪಿಗೆ ನೀಡಿಲ್ಲ. ಹಾಗಾಗಿ, 2024ರ ಮೇ 25ರಿಂದ ಖಾಲಿ ಇರುವ ವಿವಿ ಕುಲಪತಿ ಹುದ್ದೆ ನೇಮಕಕ್ಕೆ ಸರಕಾರ ಆಸಕ್ತಿ ತೋರಿಲ್ಲ. ಇದು ರಾಜ್ಯಪಾಲರನ್ನು ಕೆರಳುವಂತೆ ಮಾಡಿದೆ.
ಗದಗದ ಆರ್‌ಡಿಪಿಆರ್ ವಿವಿ ಕುಲಪತಿ ನೇಮಕ ಸಂಬಂಧ ಅರ್ಜಿ ಆಹ್ವಾನಿಸಲು ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಸೂಚಿಸಿ ತಾವು ಹಲವು ಬಾರಿ ಪತ್ರ ಬರೆದಿರುವುದನ್ನು ಉಲ್ಲೇಖಿಸಿದ್ದಾರೆ. ಈ ನೇಮಕ ಕುರಿತಂತೆ ಹಿಂದೆಯೇ ಶೋಧನಾ ಸಮಿತಿ ರಚನೆಯಾಗಿತ್ತು. ಆದರೆ, ಇದುವರೆಗೂ ಅರ್ಜಿಯನ್ನೇ ಆಹ್ವಾನಿಸಿಲ್ಲ ಎಂದು ಪ್ರಸ್ತಾಪಿಸಿದ್ದಾರೆ.
ಶೋಧನಾ ಸಮಿತಿಯನ್ನು ರಚಿಸಲಾಗಿದೆ. ಹಿಂದಿನ ಕುಲಪತಿಯ ಅವಧಿ ಪೂರ್ಣಗೊಳ್ಳುವ ಮೊದಲೇ ಅಧಿಸೂಚನೆಯನ್ನು ಹೊರಡಿಸಲಾಗಿದೆ, ಆದರೆ ರಾಜ್ಯ ಸರ್ಕಾರ ಅರ್ಜಿಗಳನ್ನು ಕರೆಯದ ಕಾರಣ ಶೋಧನಾ ಸಮಿತಿಯು ಇನ್ನೂ ತನ್ನ ಕೆಲಸವನ್ನು ಪ್ರಾರಂಭಿಸಲು ಕಾಯುತ್ತಿದೆ ಎಂದು ಅವರು ಹೇಳಿದರು.
'ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ವಿಶ್ವವಿದ್ಯಾಲಯದ ಹಿತದೃಷ್ಟಿಯಿಂದ ಕೂಡಲೇ ಕುಲಪತಿ ನೇಮಕ ಪ್ರಕ್ರಿಯೆ ಆರಂಭಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ತಪ್ಪಿದರೆ, ನಾನೇ ಅಂತಹ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಬಹುದು. ರಾಜ್ಯ ಸರಕಾರ ಅಂತಹ ಸಂದರ್ಭ ಎದುರಾಗಲು ಅವಕಾಶ ಕೊಡಬಾರದು. ವಿಶ್ವವಿದ್ಯಾಲಯಗಳ ಏಳಿಗೆಗೆ ಅನಗತ್ಯ ತೊಡಕು ಸೃಷ್ಟಿಯಾಗದಂತೆ ಎಚ್ಚರ ವಹಿಸಬೇಕು'' ಎಂದು ಕಿವಿಮಾತು ಹೇಳಿದ್ದಾರೆ.
ಈಗಿರುವ ಕಾಯಿದೆಯಂತೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದ ಉಪಕುಲಪತಿ ಹುದ್ದೆಗೆ ಅರ್ಜಿಗಳನ್ನು ಕರೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಹುದ್ದೆಯನ್ನು ದೀರ್ಘಕಾಲದವರೆಗೆ ಖಾಲಿ ಬಿಡಬೇಡಿ.
ಈ ನಿಟ್ಟಿನಲ್ಲಿ 1 ತಿಂಗಳೊಳಗೆ ನಿರ್ಣಾಯಕ ಕ್ರಮ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ತಾವೇ ಅರ್ಜಿ ಕರೆಯಬೇಕಾಗುತ್ತದೆ ಎಂದು ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಸುದೀರ್ಘ ಪತ್ರದಲ್ಲಿ ಎಚ್ಚರಿಸಿದ್ದಾರೆ.
Advertisement