
ಪಾಂಡವಪುರ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ನಾಳೆ ರಾತ್ರಿ 8 ಗಂಟೆಗೆ ವೈರಮುಡಿ ಬ್ರಹ್ಮೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಈ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ವೈರಮುಡಿ ಉತ್ಸವ ಅಂಗವಾಗಿ ನಾಳೆ ಬೆಳಿಗ್ಗೆ 7 ಗಂಟೆಗೆ ಮಂಡ್ಯ ನಗರದ ಜಿಲ್ಲಾ ಖಜಾನೆಯಿಂದ ವಜ್ರಖಚಿತ ವೈರಮುಡಿ ಹಾಗೂ ಆಭರಣಗಳನ್ನು ಜಿಲ್ಲಾಡಳಿತದ ಸಮ್ಮುಖದಲ್ಲಿ ಮೇಲುಕೋಟೆಯ ಸ್ಥಾನಿಕ ಅರ್ಚಕರು ದೇಗುಲಕ್ಕೆ ಕೊಂಡೊಯ್ಯಲಿದ್ದಾರೆ.
ಇದಕ್ಕೂ ಮುನ್ನ ಮಂಡ್ಯದ ಲಕ್ಷ್ಮಿ ಜನಾರ್ದನಾ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಿಗಿ ಭದ್ರತೆಯಲ್ಲಿ ಆಭರಣಗಳು ಸಂಜೆ ವೇಳೆಗೆ ಮೇಲುಕೋಟೆ ತಲುಪಲಿವೆ. ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳ ಪರಿಶೀಲನೆ ನಡೆಯಲಿದ್ದು, ಬಳಿಕ ಚಲುವನಾರಾಯಣನಿಗೆ ಆಭರಣಗಳನ್ನು ಧರಿಸಿ, ಮೇಲುಕೋಟೆಯ ರಾಜಬೀದಿಯಲ್ಲಿ ವಜ್ರಖಚಿತ ವೈರಮುಡಿ ಉತ್ಸವ ಜರುಗಲಿದೆ.
ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಮಂಡ್ಯ, ಮೈಸೂರು, ಬೆಂಗಳೂರು ನಗರ ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ನೂರಾರು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಬರುವ ಭಕ್ತರಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಿದ್ದು, ಪ್ರಸಾದದ ವ್ಯವಸ್ಥೆ ಸಹ ಮಾಡಲಾಗಿದೆ. ನೂರಾರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
Advertisement