
ಬೆಂಗಳೂರು: ‘ಮೆಟ್ರೊ ಪಿಲ್ಲರ್ ಹಾಗೂ ಐತಿಹಾಸಿಕ ಪಾರಂಪರಿಕ ಕಟ್ಟಡಗಳ ದೀಪಾಲಂಕಾರಕ್ಕೆ ಬ್ರಾಂಡ್ ಬೆಂಗಳೂರು ಅಡಿ ಟೆಂಡರ್ ಕರೆಯಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ನೂತನ ವಿದ್ಯುತ್ ದೀಪ ಅಲಂಕಾರ ಲೋಕಾರ್ಪಣೆಗೊಳಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಂಗಳೂರಿನ ಸುಮಾರು 40 ಕಡೆ ದೀಪಾಲಂಕಾರಕ್ಕೆ ಸ್ಥಳಗಳನ್ನು ಗುರುತಿಸಲಾಗಿದೆ. ಯಾವ, ಯಾವ ಸ್ಥಳಗಳು ಎಂದು ಅಧಿಕಾರಿಗಳು ತಿಳಿಸಲಿದ್ದಾರೆ’ ಎಂದರು.
‘ಬೆಂಗಳೂರು ನಗರದಲ್ಲಿ ಎಲ್‌ಇಡಿ ದೀಪ ಬಳಸಲಾಗುವುದು. ಈ ಹಿಂದೆ ಕರೆಯಲಾಗಿದ್ದ ಟೆಂಡರ್ ವಿಫಲವಾಗಿದ್ದು, ಮರು ಟೆಂಡರ್ ಕರೆಯಲಾಗುವುದು. ಡಿಪಿಆರ್ ಕೂಡ ಸಿದ್ಧಪಡಿಸಲಾಗಿದೆ’ ಎಂದರು.
‘ತಮ್ಮ ಅವಧಿಯಲ್ಲಿ ಸಾಕ್ಷಿಗುಡ್ಡೆಗಳನ್ನು ಸೃಷ್ಟಿ ಮಾಡಬೇಕೆಂದು ಸಭಾಧ್ಯಕ್ಷ ಯು.ಟಿ. ಖಾದರ್ ಅವರು ವಿಧಾನಸೌಧ, ವಿಕಾಸಸೌಧ, ಬೆಳಗಾವಿಯ ಸುವರ್ಣ ಸೌಧಕ್ಕೆ ದೀಪಾಲಂಕಾರ ಮಾಡಿಸಿದ್ದಾರೆ’ ಎಂದರು.
‘ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಾವೆಲ್ಲರೂ ಬೆಂಬಲವಾಗಿ ನಿಂತು ವಿಕಾಸಸೌಧ, ಉದ್ಯೋಗ ಸೌಧ ನಿರ್ಮಾಣ ಮಾಡಿ ಇತಿಹಾಸ ಸೃಷ್ಟಿಯಾಯಿತು. ಒಮ್ಮೆ ರಾಜೀವ್ ಗಾಂಧಿ ಅವರು ಬೆಂಗಳೂರಿಗೆ ಬಂದಾಗ ಜಿಪಿಒ ಕಚೇರಿಯು ವಿಧಾನಸೌಧದ ವಾಸ್ತುಶಿಲ್ಪ ಹೊಂದಿರಬೇಕು ಎಂದು ಸಲಹೆ ನೀಡಿದ್ದರು. ಈ ವೇಳೆ ಆಸ್ಕರ್ ಫರ್ನಾಂಡಿಸ್ ಕೂಡ ಇದ್ದರು’ ಎಂದು ನೆನಪಿಸಿಕೊಂಡರು.
Advertisement