
ಬೆಂಗಳೂರು: ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ನಾಡಿನ ಹಿರಿಯ ಪತ್ರಕರ್ತರು, ವಿಧಾನ ಪರಿಷತ್ ಮಾಜಿ ಸದಸ್ಯರಾದ ಪಿ. ರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.
ಸೋಮವಾರ ಬೆಳಗ್ಗೆ ರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ ಸಚಿವರು, ಆರೋಗ್ಯ ವಿಚಾರಿಸಿ ಅದಷ್ಟು ಬೇಗ ಉತ್ತಮವಾಗಿ ಚೇತರಿಸಿಕೊಳ್ಳುವಂತೆ ಶುಭ ಹಾರೈಸಿದರು.
ಕೆಲ ಹೊತ್ತು ರಾಮಯ್ಯ ಅವರ ನಿವಾಸದಲ್ಲಿಯೇ ಇದ್ದ ಸಚಿವರು, ಅವರೊಂದಿಗೆ ಉಪಹಾರ ಸೇವಿಸಿದರು. ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು; ಪ್ರಾಮಾಣಿಕ, ಮೌಲ್ಯಾಧಾರಿತ ಮಾಧ್ಯಮದ ಶ್ರೇಷ್ಠ ಕೊಂಡಿಯಾಗಿರುವ ಹಿಂದೂ ರಾಮಯ್ಯನವರು ನಮ್ಮ ತಂದೆಯವರ ವಯಸ್ಸಿನವರು ಮತ್ತು ಅವರ ಸಮಕಾಲೀನರು. ಅವರ ಅನಾರೋಗ್ಯದ ಬಗ್ಗೆ ಮಾಹಿತಿ ಬಂತು. ಅವರ ಕ್ಷೇಮ ವಿಚಾರಿಸಲು ಬಂದೆ. ಅವರು ಆರೋಗ್ಯವಾಗಿರಲಿ, ಶತಾಯುಷಿಯಾಗಿ ಸದಾ ಮಾರ್ಗದಶನ ನೀಡಲಿ ಎಂದು ಹಾರೈಸಿದೆ ಎಂದು ಹೇಳಿದ್ದಾರೆ.
ಹಿರಿಯರು ಆಗಿರುವ ರಾಮಯ್ಯ ಅವರು ಪತ್ರಿಕೋದ್ಯಮದ ಮಹಾವೃಕ್ಷ. ಅವರು ನನ್ನ ಗುರು ಸಮಾನರು. ವಿಧಾನ ಪರಿಷತ್ ಮಾಜಿ ಸದಸ್ಯರಾಗಿಯೂ ಅವರು ನಾಡಿಗೆ ಬಹುದೊಡ್ಡ ಸೇವೆ ಮಾಡಿದ್ದಾರೆ. ಅಲ್ಲದೆ, ಮೊದಲಿನಿಂದಲೂ ನನ್ನ ಬಗ್ಗೆ ಅವರು ಬಹಳಷ್ಟು ಪ್ರೀತಿ, ವಾತ್ಸಲ್ಯ ಹೊಂದಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
Advertisement