
ಬೆಂಗಳೂರು: 2025ನೇ ವರ್ಷದ ಮೊದಲ ಎರಡು ತಿಂಗಳಲ್ಲಿ ಕರ್ನಾಟಕದಾದ್ಯಂತ ಪ್ರತಿದಿನ ಸರಾಸರಿ 15 ಲೈಂಗಿಕ ಕಿರುಕುಳ ಪ್ರಕರಣಗಳು ವರದಿಯಾಗಿದ್ದು, ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಕಳೆದ ವರ್ಷ 2024 ರಲ್ಲಿ 6,319 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ, ಆದರೆ ಇವುಗಳಲ್ಲಿ ಒಂಬತ್ತು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.
ರಾಜ್ಯದಲ್ಲಿ ಪ್ರತಿದಿನ ಒಂದೇ ಒಂದು ಹೆಣ್ಣುಮಕ್ಕಳನ್ನು ಚುಡಾಯಿಸುವಿಕೆ ಪ್ರಕರಣ ವರದಿಯಾಗಿದ್ದು, ಇಂತಹ ಪ್ರಕರಣ ನಡೆದಿದ್ದರೂ ವರದಿಯಾಗದಿರುವುದು ಕಾರಣ ಎಂದು ತಜ್ಞರು ಹೇಳುತ್ತಾರೆ. ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (SCRB) ದ ಮಾಹಿತಿಯ ಪ್ರಕಾರ, ಈ ವರ್ಷದ ಮೊದಲ ಎರಡು ತಿಂಗಳಲ್ಲಿ 901 ಲೈಂಗಿಕ ಕಿರುಕುಳ ಪ್ರಕರಣಗಳು ಮತ್ತು 78 ಚುಡಾಯಿಸುವಿಕೆ ಪ್ರಕರಣಗಳು ವರದಿಯಾಗಿವೆ.
2024 ರಲ್ಲಿ ವರದಿಯಾದ 6,319 ಪ್ರಕರಣಗಳಲ್ಲಿ 3,908 ವಿಚಾರಣೆ ಹಂತದಲ್ಲಿವೆ, 1,734 ಇನ್ನೂ ತನಿಖೆ ಹಂತದಲ್ಲಿವೆ ಮತ್ತು 45 ಪ್ರಕರಣಗಳು ಪತ್ತೆಯಾಗಿಲ್ಲ. ಹೆಚ್ಚುವರಿಯಾಗಿ, ಕಳೆದ ವರ್ಷ 180 ಹೆಣ್ಣುಮಕ್ಕಳ ಚುಡಾಯಿಸುವಿಕೆ ಪ್ರಕರಣಗಳು ವರದಿಯಾಗಿವೆ.
ಜನವಾದಿ ಮಹಿಳಾ ಸಂಘಟನೆಯ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಕೆ.ಎಸ್. ವಿಮಲಾ ಅವರು TNIE ಗೆ ನೀಡಿದ ಸಂದರ್ಶನದಲ್ಲಿ, ಸಾಮಾಜಿಕ ಕಳಂಕ, ಭೀತಿ, ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆಯ ಕೊರತೆಯಿಂದಾಗಿ ಇಂತಹ ಘಟನೆಗಳು ವರದಿಯಾಗದೇ ಇರುವುದರಿಂದ ನಿಜವಾದ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳುತ್ತಾರೆ. ಮಹಿಳೆಯರು ದೂರು ನೀಡಲು ಹೋದಾಗಲೂ ಪೊಲೀಸರು ಸೂಕ್ಷ್ಮತೆಯಿಂದ ಪ್ರತಿಕ್ರಿಯಿಸುವುದಿಲ್ಲ. ರಾತ್ರಿಯಲ್ಲಿ ಅವರು ಏಕೆ ಹೊರಗೆ ಹೋಗುತ್ತಾರೆ ಅಥವಾ ಏಕೆ ಒಂಟಿಯಾಗಿದ್ದಾರೆ ಎಂದು ಕೇಳುವುದರಿಂದ ಹೆಣ್ಣುಮಕ್ಕಳು ದೂರು ನೀಡಲು ನಿರುತ್ಸಾಹಗೊಳ್ಳುತ್ತಾರೆ ಎನ್ನುತ್ತಾರೆ ವಿಮಲಾ.
ಕಡಿಮೆ ಶಿಕ್ಷೆ ಪ್ರಮಾಣ ತಪ್ಪು ಸಂದೇಶವನ್ನು ರವಾನಿಸುತ್ತದೆ: ಕಾರ್ಯಕರ್ತೆ
ದೌರ್ಜನ್ಯ ಪ್ರಕರಣದ ಕುರಿತು ಗೃಹ ಸಚಿವ ಜಿ. ಪರಮೇಶ್ವರ ಅವರ ಇತ್ತೀಚಿನ ಹೇಳಿಕೆಗಳನ್ನು ಕಾರ್ಯಕರ್ತೆ ವಿಮಲಾ ಟೀಕಿಸಿದ್ದಾರೆ. ಅಧಿಕಾರದಲ್ಲಿರುವವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದಾಗ, ಅದು ಅಪರಾಧ ಮಾಡುವವರನ್ನು ಪ್ರೋತ್ಸಾಹಿಸುತ್ತದೆ ಎನ್ನುತ್ತಾರೆ. ಜಾಗೃತಿಯಿಂದಾಗಿ ಹೆಚ್ಚಿನ ಮಹಿಳೆಯರು ಈಗ ಲೈಂಗಿಕ ಕಿರುಕುಳದ ಘಟನೆಗಳನ್ನು ವರದಿ ಮಾಡುತ್ತಿದ್ದರೆ, ಅನೇಕರಿಗೆ ಇನ್ನೂ ಚುಡಾಯಿಸುವಿಕೆ ಪ್ರಕರಣ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ, ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಗಟ್ಟುವ ಕ್ರಮಗಳ ಮೂಲಕ ಮಾತ್ರ ನಿಯಂತ್ರಿಸಬಹುದು ಎನ್ನುತ್ತಾರೆ.
ಮಹಿಳೆಯರು ರಾತ್ರಿಯಲ್ಲಿ ಮಾತ್ರವಲ್ಲ, ಹಗಲಿನಲ್ಲೂ ಅಸುರಕ್ಷಿತರಾಗಿದ್ದಾರೆ. ಪೊಲೀಸ್ ಗಸ್ತು ತೀವ್ರಗೊಳಿಸುವುದು ಮತ್ತು ದುರ್ಬಲ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅಂತಹ ಅಪರಾಧಗಳನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಅವರು.
ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಮಹಿಳಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಮಹಿಳಾ ಆಯೋಗ ವಿಫಲವಾಗಿದೆ ಎಂದು ವಿಮಲಾ ಟೀಕಿಸುತ್ತಾರೆ. ದೌರ್ಜನ್ಯಗಳಿಗೆ ಶಿಕ್ಷೆ ಪ್ರಮಾಣ ಕಡಿಮೆ ಇರುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎನ್ನುತ್ತಾರೆ.
ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಯೊಬ್ಬರು, ಅನೇಕ ಘಟನೆಗಳು ಇನ್ನೂ ವಿವಿಧ ಕಾರಣಗಳಿಗಾಗಿ ವರದಿಯಾಗುವುದಿಲ್ಲ ಎಂದು ಒಪ್ಪಿಕೊಂಡರು. ಇತ್ತೀಚಿನ ಘಟನೆಯೊಂದರಲ್ಲಿ ಮಹಿಳೆ ಪೊಲೀಸರನ್ನು ಸಂಪರ್ಕಿಸಲಿಲ್ಲ ಎನ್ನುತ್ತಾರೆ ಅವರು.
Advertisement