
ಬೆಂಗಳೂರು: ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 19ನೇ ಪುಣ್ಯತಿಥಿ ಇಂದು ಏಪ್ರಿಲ್ 12ರಂದು ಆಗಿದ್ದು, ಕುಟುಂಬಸ್ಥರು, ಅಭಿಮಾನಿಗಳು ಕಂಠೀರವ ಸ್ಟುಡಿಯೊದಲ್ಲಿರುವ ಅವರ ಸ್ಮಾರಕ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆಯಿಂದಲೇ ಕಂಠೀರವ ಸ್ಟುಡಿಯೊ ಬಳಿ ಸಾವಿರಾರು ಮಂದಿ ಹೋಗಿ ಡಾ ರಾಜ್ ಸಮಾಧಿಗೆ ಹೋಗಿ ನಮನ ಸಲ್ಲಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಾ ರಾಜ್ ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್ ಅವರ ಕುಟುಂಬ, ರಾಘವೇಂದ್ರ ರಾಜ್ ಕುಮಾರ್ ಅವರ ಮಕ್ಕಳು, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಜರಿದ್ದರು. ತಮ್ಮ ಸಿನಿಮಾಗಳು, ಗಾಯನ, ಅಭಿನಯ, ವ್ಯಕ್ತಿತ್ವದಿಂದ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿರುವ ಡಾ ರಾಜ್ ಕುಮಾರ್ ಹೆಸರಿನಲ್ಲಿ ಇಂದಿಗೂ ಅನೇಕ ಉತ್ತಮ ಕಾರ್ಯಗಳು ನಡೆಯುತ್ತಿವೆ.
ಸಿನಿಮಾಗಳ ಮೂಲಕ ಮನರಂಜನೆ ಒದಗಿಸಿದ್ದು ಮಾತ್ರವಲ್ಲದೇ, ಕನ್ನಡ ನಾಡಿನ ನೆಲ ಜಲ ಭಾಷೆ ವಿಷಯ ಬಂದಾಗ ಹೋರಾಟದ ಹಾದಿಯನ್ನೂ ಹಿಡಿಯುತ್ತಿದ್ದರು. ನಾಡಿನ ಸಂರಕ್ಷಣೆ ವಿಷಯದಲ್ಲಿ ಸದಾ ಮುಂದಿರುತ್ತಿದ್ದರು. ಕೋಟ್ಯಂತರ ಅಭಿಮಾನಿಗಳಿಂದ ದೇವತಾ ಮನುಷ್ಯ ಎಂದು ಕರೆಸಿಕೊಂಡ ರಾಜ್ಕುಮಾರ್ ಅಭಿಮಾನಿಗಳೆದೆಯಲ್ಲಿ ಸದಾ ಅಜರಾಮರ.
Advertisement