
ಬೆಂಗಳೂರು: ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಹತ್ಯೆ ಸಂಚು ರೂಪಿಸಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಯತ್ನಾಳ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಒಬ್ಬ ಯುವಕ ಆಡಿಯೋ ಸಂದೇಶದಲ್ಲಿ ಹತ್ಯೆಯ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಕೊಲೆ ಬೆದರಿಕೆಯೊಡ್ಡಲಾಗಿದೆ ಎನ್ನಲಾದ ವಾಟ್ಸಾಪ್ ಆಡಿಯೋ ಹರಿದಾಡುತ್ತಿದೆ. ಆದರೆ, ಆಡಿಯೋ ಮಾಡಿದ್ದು ಯಾರು ಎಂಬುವುದಕ್ಕೆ ಖಚಿತತೆ ಇಲ್ಲ. ಈ ಬಗ್ಗೆ ಯಾವುದೇ ದೂರು ಸಹ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯಪುರದ ಆಲಂಗೀರ್ ಸಭಾಂಗಣದಲ್ಲಿ ಎಂಎಂಸಿ ಸಭೆ ನಡೆದಿದ್ದು, ಮುಸ್ಲಿಂ ಸಮಾಜದ ಹಿರಿಯರೆಲ್ಲರೂ ಸೇರಿ ಯತ್ನಾಳ ಬಂಧನಕ್ಕೆ ಆಗ್ರಹಿಸಿ ಏಪ್ರಿಲ್ 15ರಂದು ವಿಜಯಪುರ ಬಂದ್ ನಡೆಸಲು ನಿರ್ಧರಿಸಿದ್ದೇವೆ. ಅಂದು ಒಂದು ಲಕ್ಷಕ್ಕೂ ಅಧಿಕ ಜನ ಸೇರಲಿದ್ದೇವೆ. ಅಂಬೇಡ್ಕರ್ ವೃತ್ತದಿಂದ ರ‍್ಯಾಲಿ ಆರಂಭಿಸಿ, ಯತ್ನಾಳ ಮನೆಗೆ ಮುತ್ತಿಗೆ ಹಾಕುತ್ತೇವೆ. ಅಂದು ಯತ್ನಾಳಗೆ ಅಂತಿಮ ದಿನವಾಗಲಿದೆ, ಮುಸ್ಲಿಮರು ಸಜ್ಜಾಗಿದ್ದೇವೆ ಎಂದು ಎಚ್ಚರಿಕೆ ಸಂದೇಶದಲ್ಲಿ ನೀಡಲಾಗಿದೆ.
ಮೂರು ದಿನಗಳ ಹಿಂದೆ ಕಿಡಿಗೇಡಿಗಳು ಈ ಆಡಿಯೊ ಹರಿಬಿಟ್ಟಿದ್ದಾರೆ. ಇದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಯಾರೂ ಈ ಸಂಬಂಧ ದೂರು ನೀಡಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ. ಏ.7ರಂದು ಹುಬ್ಬಳ್ಳಿಯಲ್ಲಿ ನಡೆದ ರಾಮ ನವಮಿ ಕಾರ್ಯಕ್ರಮದಲ್ಲಿ ಶಾಸಕ ಯತ್ನಾಳ್, ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ನಗರದ ಗೋಳಗುಮ್ಮಟ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ವ್ಯಕ್ತಿಯೊಬ್ಬ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಶಾಸಕ ಯತ್ನಾಳ್ ಬಗ್ಗೆ ಉರ್ದುವಿನಲ್ಲಿ ಮಾತನಾಡಿದ ಆಡಿಯೋ ಇದಾಗಿದೆ.
Advertisement