
ಬೆಂಗಳೂರು: ಏಪ್ರಿಲ್ 17 ರಂದು ಸಚಿವ ಸಂಪುಟವು ಜಾತಿ ಜನಗಣತಿ ವರದಿಯನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿದೆ ಹೀಗಾಗಿ ಎಲ್ಲರ ಚಿತ್ತ ಎಪ್ರಿಲ್ 17 ನಿರ್ಧಾರದ ಮೇಲೆ ನೆಟ್ಟಿದೆ.
ವರದಿಯಲ್ಲಿ ಸೋರಿಕೆಯಾದ ವಿಷಯಗಳಲ್ಲಿ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾತಿ ಹೆಚ್ಚಿಸುವ ಬಗ್ಗೆ ಸೂಚಿಸುತ್ತವೆ. ಜಾತಿ ಜನಗಣತಿ ವರದಿ ಅಥವಾ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಶುಕ್ರವಾರ ಸಚಿವ ಸಂಪುಟಕ್ಕೆ ಸಲ್ಲಿಸಲಾಯಿತು.
ಈ ವರದಿಯಿಂದ ಬಿಜೆಪಿಗೆ ಹಿನ್ನಡೆ ಆದಂತೆ ಕಾಣುತ್ತದೆ, ಏಕೆಂದರೆ ಅವರ ಬಳಿ ಕೇವಲ ಕೆಲವು ಒಬಿಸಿ ನಾಯಕರು ಉಳಿದಿದ್ದಾರೆ. ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ವಿಧಾನಸಭೆಯಲ್ಲಿ ಇಲ್ಲ, ಕೋಟ ಶ್ರೀನಿವಾಸ್ ಪೂಜಾರಿ - ಉಡುಪಿ-ಚಿಕ್ಕಮಗಳೂರು ಸಂಸದರಾಗಿ ಬಡ್ತಿ ಪಡೆದಿದ್ದಾರೆ, ಈಡಿಗರಾಗಿರುವ ಅವರು ಹಿಂದುಳಿದ ಜಾತಿಗಳ ವಿರುದ್ಧದ ಬಿಜೆಪಿಯ ಹೋರಾಟದಲ್ಲಿ ಈ ನಾಯಕರು ಸೇರಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಉಳಿದವರೆಂದರೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತ್ರ.
ಸಿದ್ದರಾಮಯ್ಯನವರಿಂದ ಸಿದ್ದರಾಮಯ್ಯನವರಿಗಾಗಿ ಸಿದ್ದರಾಮಯ್ಯನವರಿಗೋಸ್ಕರ ಸಿದ್ದರಾಮಯ್ಯನವರೇ ಕೈ ಹಿಡಿದು ಬರೆಸಿದ್ದೇ ಈ ಜಾತಿ ಗಣತಿ. ಬೆಲೆ ಏರಿಕೆ, ನಾಯಕತ್ವ ಬದಲಾವಣೆ, ಹನಿ ಟ್ರ್ಯಾಪ್ ನಂಥ ವಿಚಾರಗಳು ತಮ್ಮ ಖುರ್ಚಿಗೆ ಧಕ್ಕೆ ತಂದಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಜಾತಿ ಗಣತಿ ಹೆಲ್ಮೆಟ್ ಧರಿಸಿದ್ದಾರೆ ಎಂದು ಶಾಸಕ ಸುನೀಲ್ ಕುಮಾರ್ ಲೇವಡಿ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಈ ಸಮೀಕ್ಷಾ ವರದಿಯ ಸೋರಿಕೆಯಾದ ಭಾಗಗಳ ಪ್ರಕಾರ ಮುಸ್ಲಿಮರು ಅತಿದೊಡ್ಡ ಜನ ಸಮುದಾಯ, ಹಿಂದುಗಳನ್ನು ಜಾತಿಯ ಹೆಸರಿನಲ್ಲಿ ಛಿದ್ರಗೊಳಿಸಿ ಮುಸ್ಲಿಮರನ್ನು ಪೋಷಿಸಿ ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ಕೆಲಸವನ್ನು ಸಿದ್ದರಾಮಯ್ಯ ವ್ಯವಸ್ಥಿತವಾಗಿ ನಡೆಸಿದ್ದಾರೆ.
ಈಗಿನ ಲೆಕ್ಕಾಚಾರ ಗಮನಿಸಿದರೆ ಸಿದ್ದರಾಮಯ್ಯರಿಗೆ ಈ ಸಮೀಕ್ಷಾ ವರದಿ ಅನುಷ್ಠಾನಗೊಳಿಸುವ ಯಾವ ಬದ್ಧತೆಯೂ ಇದ್ದಂತಿಲ್ಲ. ಎಲ್ಲ ಸಮಾಜವನ್ನು ಸಂಖ್ಯಾಬಲ ಪ್ರದರ್ಶನಕ್ಕೆ ಬಿಟ್ಟಿರುವ ಸಿದ್ದರಾಮಯ್ಯ ಮೀಸಲಾತಿ ವಂಚಿತರು, ಮೀಸಲಾತಿಯನ್ನು ಅತಿಯಾಗಿ ಭಕ್ಷಿಸಿದ ಹಿಂದುಳಿದ ಜಾತಿಗಳು, ಮೀಸಲಾತಿ ಹೆಚ್ಚಳದ ಅನಿವಾರ್ಯತೆ ಇತ್ಯಾದಿ ವಿಚಾರಗಳ ಚರ್ಚೆ ಬೇಕಿಲ್ಲ.
ವಿಶೇಷ ಕ್ಯಾಬಿನೆಟ್, ಸಂಪುಟ ಉಪಸಮಿತಿ ಹೆಸರಿನಲ್ಲಿ ಒಂದಿಷ್ಟು ಕಾಲಹರಣ ನಡೆಸುವುದು ಸದ್ಯದ ಲೆಕ್ಕಾಚಾರ. ಹಿಂದುಳಿದ ವರ್ಗಗಳ ಚ್ಯಾಂಪಿಯನ್ ಎಂದು ಸ್ವಯಂ ಘೋಷಿಸಿಕೊಂಡ ಸಿದ್ದರಾಮಯ್ಯನವರೇ ಈ ವರದಿಯಿಂದ ಹಿಂದುಳಿದ ವರ್ಗದವರಿಗೆ ಆಗುವ ಪ್ರಯೋಜನ ಏನೆಂಬುದರ ಬಗ್ಗೆ ಮೊದಲು ಚರ್ಚೆಯಾಗಬೇಕು.
ಅದಕ್ಕಿಂತ ಹೆಚ್ಚಾಗಿ ಒಟ್ಟಾರೆ ಸಮಾಜದ ಮೇಲಿನ ಪರಿಣಾಮವೇನೆಂಬುದು ವಿಶ್ಲೇಷಣೆಗೆ ಒಳಪಡಬೇಕು. ವರದಿಯ ವೈಜ್ಞಾನಿಕತೆ ಹಾಗೂ ಪ್ರಸ್ತುತತೆಯ ಬಗ್ಗೆ ತುರ್ತು ಅಧ್ಯಯನಕ್ಕೆ ಉಭಯಸದನದ ಜಂಟಿ ಸದನ ಸಮಿತಿ ರಚನೆ ಮಾಡಿ. ಸುಮ್ಮನೆ ವರದಿ ಮಂಡಿಸಿ ಗಾಳಿಯಲ್ಲಿ ಗುಂಡು ಹೊಡೆದರೆ "ಮನೆಗೆ ಮಗನ್ನಲ್ಲ"..... ಎಂಬಂತಾಗುತ್ತದೆಯಷ್ಟೇ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.
ಹಿಂದುಳಿದ ಜಾತಿಗಳು ಬಿಜೆಪಿಯ ವೀಕ್ ನೆಸ್ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರಿಗೆ ಹೋಲಿಸಿದರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಪಕ್ಷವು ನೀಡುವ ವಿಧಾನಸಭೆ ಮತ್ತು ಸಂಸತ್ ಟಿಕೆಟ್‌ಗಳ ಸಂಖ್ಯೆಯು ಪಕ್ಷದ ಆದ್ಯತೆಯನ್ನು ಬಹಿರಂಗಪಡಿಸುತ್ತದೆ. ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿರುವ ಹಿಂದುಳಿದ ವರ್ಗಗಳ ಪ್ರತಿನಿಧಿಗಳನ್ನು ಸಹ ಹೋಲಿಸಿ ನೋಡಿದರೆ ನಿಜವಾದ ಚಿತ್ರ ಹೊರಬರುತ್ತದೆ ಎಂದು ಅವರು ಹೇಳಿದ್ದಾರೆ.
Advertisement