ಹುಬ್ಬಳ್ಳಿ ಎನ್‌ಕೌಂಟರ್: ಆರೋಪಿ ಬಿಹಾರ ಕಾರ್ಮಿಕನ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ
ಬೆಂಗಳೂರು: ಏಪ್ರಿಲ್ 13 ರಂದು ಹುಬ್ಬಳ್ಳಿಯಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್ ನಲ್ಲಿ ಮೃತಪಟ್ಟ ಬಿಹಾರದ ವಲಸೆ ಕಾರ್ಮಿಕನ ಮರಣೋತ್ತರ ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನಗರದಲ್ಲಿ ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೊಲೆ ಮಾಡಿದ ಆರೋಪದ ಮೇಲೆ ಬಿಹಾರ ಕಾರ್ಮಿಕ ರಿತೇಶ್ ಕುಮಾರ್ ನನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು. ಆದರೆ ಸ್ಥಳ ಮಹಜರಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಆರೋಪಿ ರಿತೇಶ್ ಶವಸಂಸ್ಕಾರಕ್ಕೆ ತಡೆ ಕೋರಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್(ಪಿಯುಸಿಎಲ್) ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಆರೋಪಿಯ ಮರಣೋತ್ತರ ಪರೀಕ್ಷೆಗೆ ಆದೇಶ ಹೊರಡಿಸಿದೆ.
ಸ್ಥಳೀಯ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಪೀಠ ಆದೇಶಿಸಿದೆ.
"ಮರಣೋತ್ತರ ಪರೀಕ್ಷೆಯ ವಿಧಾನದ ಉದ್ದಕ್ಕೂ ವಿಡಿಯೋಗ್ರಫಿ ಮಾಡಬೇಕು ಮತ್ತು ಮುಂದಿನ ತನಿಖೆಗಾಗಿ ಸಂಭಾವ್ಯ ದೇಹದ ಮಾದರಿಗಳನ್ನು ಸಂರಕ್ಷಿಸಬೇಕು" ಎಂದು ನ್ಯಾಯಾಲಯ ಹೇಳಿದೆ.
ಪಿಯುಸಿಎಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆದಿತ್ಯ ಸೋಂಧಿ, ಮೃತರ ವಿರುದ್ಧದ ಆರೋಪಗಳ ಸ್ವರೂಪ ಮತ್ತು ಆಪಾದಿತ ಎನ್‌ಕೌಂಟರ್ ಸುತ್ತಲಿನ ಸಂದರ್ಭಗಳ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
"ಈ ಹಂತದಲ್ಲಿ ನಾವು ಯಾವುದೇ ಪ್ರತಿಕೂಲ ಹೇಳಿಕೆಗಳನ್ನು ನೀಡುತ್ತಿಲ್ಲ. ಕಡ್ಡಾಯ ಮಾರ್ಗಸೂಚಿಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಮಾತ್ರ ನಮ್ಮ ವಿನಂತಿಯಾಗಿದೆ" ಎಂದು ಅವರು ಹೇಳಿದರು. ಮೃತದೇಹವನ್ನು ದಹಿಸುವ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ ಸೋಂಧಿ, ದೇಹವನ್ನು ಸಂರಕ್ಷಿಸಲು ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ, ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಅಪರಾಧ ತನಿಖಾ ಇಲಾಖೆ(ಸಿಐಡಿ) ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಶವವನ್ನು ಅಂತ್ಯಕ್ರಿಯೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"ಮೃತ ದೇಹವನ್ನು ಹೂತು ಹಾಕಲಾಗುವುದು. ದಹನ ಮಾಡುವುದಿಲ್ಲ. ಮುಂದೆ ಅಗತ್ಯವಿದ್ದರೆ ದೇಹವನ್ನು ನಂತರ ಹೊರತೆಗೆಯಬಹುದು. ಗುರುತಿಸುವಿಕೆಯ ನಂತರ ಮಾತ್ರ ಶವವನ್ನು ಅಂತ್ಯಕ್ರಿಯೆಗಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ" ಎಂದು ಅವರು ಹೇಳಿದರು.
ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್‌ಗಳನ್ನು ಜಾರಿ ಮಾಡಿದ್ದು, ಏಪ್ರಿಲ್ 24 ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.


