
ಬೆಂಗಳೂರು: ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ.
ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ಬೆಳಗಾವಿಯ ಟಿಳಕವಾಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆಧುನಿಕ ಸೌಲಭ್ಯಗಳುಳ್ಳ ಬಹುಮಹಡಿ ಕಲಾ ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ, ಈಗಾಗಲೇ ಗುತ್ತಿಗೆ ನೌಕರರನ್ನು ಕನಿಷ್ಠ ವೇತನ ಅಡಿಯಲ್ಲಿ ತರಲಾಗಿದೆ. ಇದನ್ನು ಮಾಡಿದ್ದು ನಮ್ಮ ಸರ್ಕಾರವೇ, ಈಗ ಖಾಯಂ ಮಾಡುವುದೂ ಕೂಡ ನಮ್ಮ ಸರ್ಕಾರವೇ ಎಂದರು.
ಇದಲ್ಲದೇ ಚಾಲಕರು, ನಿರ್ವಾಹಕರಿಗೂ ಕನಿಷ್ಠ ವೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ದಿವ್ಯಾಂಗರಿಗೂ ತ್ರಿಚಕ್ರ ವಾಹನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 150 ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಇದರಲ್ಲಿ 102 ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಉಳಿದವು ಸದ್ಯದಲ್ಲೇ ಪೂರ್ಣಗೊಳ್ಳಲಿವೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ₹6,928 ಕೋಟಿ ಮೊತ್ತದ ಕೆಲಸಗಳು ನಡೆಯುತ್ತಿವೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ನಿರಂತರವಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಭಾಗಿತ್ವದ ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕ ಕಲಾ ಮಂದಿರ ಹಾಗೂ ವಾಣಿಜ್ಯ ಮಳಿಗೆ ಸ್ಥಾಪಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ಇದಾಗಿದೆ. ರಾಜ್ಯದ ಎಲ್ಲೆಡೆ ವಾಣಿಜ್ಯ ಸಂಕೀರ್ಣ, ಬಸ್ ನಿಲ್ದಾಣ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಸಾರ್ವಜನಿಕರು ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಎಲ್ಲ ಪೌರಕಾರ್ಮಿಕರರಿಗೆ ಸ್ಥಳೀಯ ಸಂಸ್ಥೆಗಳ ಮೂಲಕವೇ ವೇತನ ನೀಡುವುದರ ಜತೆಗೆ ಅವರನ್ನು ಸರಕಾರಿ ನೌಕರರಾಗಿ ಪರಿಗಣಿಸಲು ಕ್ರಮ ತೆಗೆದುಕೊಳ್ಳಲಾಗುವುದು.
ಎರಡು ದಾಖಲೆಗಳಿದ್ದರೆ ಕ್ರಯಪತ್ರ ಜತೆಗೆ ವಿದ್ಯುತ್ ಹಾಗೂ ನೀರು ಸರಬರಾಜು ಬಿಲ್ ಗಳನ್ನು ಕೂಡ ಪರಿಗಣಿಸಿ ಇ-ಖಾತೆ ಮಾಡಿಕೊಡಲು ಸರಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.
Advertisement