News headlines 27-04-2025| ಪಾಕ್ ವಿರುದ್ಧ ಯುದ್ಧ ಬೇಡ ಅಂತ ಹೇಳಿಲ್ಲ- ಸಿಎಂ; ಕಬ್ಬಡ್ಡಿ ವೀಕ್ಷಕರ ಗ್ಯಾಲರಿ ಕುಸಿದು ಓರ್ವ ಸಾವು, 13 ಮಂದಿ ಗಾಯ; ವಿದ್ಯುತ್ ಉಚಿತವಾಗಿ ಕೊಡಿ ಅಂತ ಕೇಳಿದ್ಯಾರು?: ಹೈಕೋರ್ಟ್ ತರಾಟೆ

News headlines
ಸುದ್ದಿ ಮುಖ್ಯಾಂಶಗಳುonline desk

1. ಪಾಕ್ ವಿರುದ್ಧ ಬೇಡ ಅಂತ ಹೇಳಿಲ್ಲ, ಟೀಕೆಗಳ ಬೆನ್ನಲ್ಲೇ ಸಿದ್ದರಾಮಯ್ಯ ಸ್ಪಷ್ಟನೆ

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಹಲವು ರಾಜತಾಂತ್ರಿಕ ನಿರ್ಧಾರಗಳನ್ನು ಪ್ರಕಟಿಸಿದ್ದು, ಈ ನಡುವೆ, ಪಾಕಿಸ್ತಾನದ ಜೊತೆಗೆ ಯುದ್ಧದ ಅನಿವಾರ್ಯತೆ ಎದುರಾಗಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಪಾಕಿಸ್ತಾನದ ಸುದ್ದಿ ವಾಹಿನಿಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಹೇಳಿಕೆಗೆ ದೇಶಾದ್ಯಂತಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ಪಾಕಿಸ್ತಾನ ಮೇಲೆ ಯುದ್ಧ ಬೇಡ ಎಂದು ನಾನು ಹೇಳಿಲ್ಲ, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವುದೇ ಬೇಡವೆಂದು ನಾನು ಹೇಳಿಲ್ಲ. ಯುದ್ಧ ಅನಿವಾರ್ಯವಾದರೆ ಮಾತ್ರ ಮಾಡಬೇಕು. ಯುದ್ಧದಿಂದಲೇ ಪರಿಹಾರ ಅಲ್ಲ, ಯುದ್ಧ ಬೇಡವೇ ಬೇಡ ಎಂದು ನಾನು ಹೇಳಿಲ್ಲ, ಅನಿವಾರ್ಯವಾದರೆ ಮಾಡಬೇಕಾಗುತ್ತದೆ, ಈಗ ತಕ್ಷಣಕ್ಕೆ ಬೇಡ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಇದಕ್ಕೂ ಮೊದಲು ಇಂದು ಬೆಳಗ್ಗೆ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರಲ್ಲಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದ್ದಾಗ, ನಾನು ಪ್ರತಿಕ್ರಿಯಿಸುವುದಿಲ್ಲ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಎಂದು ಅವರನ್ನೇ ಕೇಳಿ ಸ್ಪಷ್ಟಪಡಿಸಿಕೊಳ್ಳಿ ಈಗಾಗಲೇ ನಾವು ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದ್ದಾರೆ.

2. ಜೀನಿ ಕಂಪೆನಿ ಎಂಡಿ ದಿಲೀಪ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಕೇಸು ದಾಖಲು

ಜನಪ್ರಿಯ 'ಜೀನಿ' ಬ್ರಾಂಡ್ ಪೌಷ್ಠಿಕ ಆಹಾರದ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಕುಮಾರ್ ವಿರುದ್ಧ ಮಹಿಳಾ ಉದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ತುಮಕೂರಿನ ಸಿರಾ ತಾಲ್ಲೂಕಿನ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ದೂರಿನ ನಂತರ, ರತ್ನಸಂದ್ರ ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಆಗಿರುವ ದಿಲೀಪ್ ಕುಮಾರ್ ತಲೆಮರೆಸಿಕೊಂಡಿದ್ದಾರೆ. ನಂತರ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ದಿಲೀಪ್ ಕುಮಾರ್, ನನ್ನ ರಾಜಕೀಯ ಪ್ರತಿಸ್ಪರ್ಧಿಗಳು ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ, ಇದರಲ್ಲಿ ನಾನು ಜಯಿಸಿ ಬರುತ್ತೇನೆ ಎಂದು ಹೇಳಿದ್ದಾರೆ.

3. ವಿದ್ಯುತ್ ಉಚಿತವಾಗಿ ಕೊಡಿ ಅಂತ ನಿಮ್ಮನ್ನ ಕೇಳಿದ್ಯಾರು?: ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಉಚಿತ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು? ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಹೊಸ ಹಾಗೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕಕ್ಕೆ ಸ್ಮಾರ್ಟ್‌ ಪ್ರೀ ಪೇಯ್ಡ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಿರುವ ಬೆಸ್ಕಾಂ ಕ್ರಮಕ್ಕೆ ತಡೆ ನೀಡಿದೆ. ದೊಡ್ಡಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಜಯಲಕ್ಷ್ಮೀ ಎಂಬುವರಿಗೆ ನೀಡಿದ್ದ ಸಂವಹನ ಪತ್ರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಹೊಸದಾಗಿ ನಿರ್ಮಾಣಗೊಂಡಿರುವ ಮನೆಯೊಂದಕ್ಕೆ ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಳ್ಳುವಂತೆ ಬೆಸ್ಕಾಂ ನೀಡಿದ್ದ ನೋಟಿಸ್‌ಗೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಮುಂದೂಡಿದೆ. ಅರ್ಜಿದಾರರ ಪರವಾಗಿ ವಾದಿಸಿದ ವಕೀಲರು, ಸ್ಮಾರ್ಟ್‌ ಮೀಟರ್‌ ದೇಶದ ಬೇರೆಬೇರೆ ಕಡೆ 950 ರೂಪಾಯಿ ಇದೆ. ಆದರೆ, ನಮ್ಮಲ್ಲಿ ರೂ.8,000ಕ್ಕೂ ಅಧಿಕ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

4. ಕಸ್ತೂರಿ ರಂಗನ್ ಅಂತ್ಯಕ್ರಿಯೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದಿದೆ. ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ ಕಸ್ತೂರಿ ರಂಗನ್ ಏ.25 ರಂದು ಮೃತಪಟ್ಟಿದ್ದರು. ಡಾ. ಕಸ್ತೂರಿರಂಗನ್ ಅವರ ಹಿರಿಯ ಮಗ ಸಂಜಯ್ ರಂಜನ್ ಅಮೆರಿಕದಿಂದ ಹಿಂದಿರುಗಿದ ನಂತರ ಅಂತ್ಯಕ್ರಿಯೆ ನಡೆದಿದೆ. 1940ರ ಅಕ್ಟೋಬರ್ 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದ ಕಸ್ತೂರಿರಂಗನ್ ಅವರು ಮೂರು ದಶಕಗಳ ಕಾಲ ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಷ್ಟೇ ಅಲ್ಲದೆ, ಪರಿಸರ, ಶಿಕ್ಷಣ ಮತ್ತು ಯೋಜನಾ ಆಯೋಗದಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ.

5. ಮಂಡ್ಯ: ಕಬ್ಬಡ್ಡಿ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದು ಓರ್ವ ಸಾವು, 13 ಮಂದಿ ಗಾಯ

ಕಬಡ್ಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿ, 13 ಮಂದಿ ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮಲ್ಲನಾಯಕನ ಕಟ್ಟೆ ಗ್ರಾಮದಲ್ಲಿ ನಡೆದಿದೆ. ಪಾಪಣ್ಣಚಾರಿ ಮೃತ ವ್ಯಕ್ತಿಯಾಗಿದ್ದು, ಗಾಯಾಳುಗಳನ್ನು ಕೂಡಲೇ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಡಿಮೆ ಸಾಮರ್ಥ್ಯದ ಕಬ್ಬಿಣ ಬಳಕೆ ಮಾಡಿರುವುದು, ಇಂಟರ್ ಲಾಕ್ ಬಳಸದೆ ಇರುವುದು ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com