News headlines 28-04-2025 | ವೇದಿಕೆಯಲ್ಲೇ ಎಎಸ್ ಪಿ ಮೇಲೆ ಕೈ ಎತ್ತಿದ ಸಿಎಂ!; ಪಹಲ್ಗಾಮ್ ದಾಳಿ: ಬೆಂಗಳೂರಿನಲ್ಲಿ ಸಂತ್ರಸ್ತರ ವಿಚಾರಣೆ ನಡೆಸಿದ NIA; ರಸ್ತೆಗಳ ಸ್ಥಿತಿ ಶೋಚನೀಯ: ಡಿಸಿಎಂಗೆ ತೇಜಸ್ವಿ ಸೂರ್ಯ ಪತ್ರ; ರೈಲ್ವೆ ಪರೀಕ್ಷೆಯಲ್ಲೂ ಜನಿವಾರ, ಮಂಗಳಸೂತ್ರ ವಿವಾದ!

News headlines
ಸುದ್ದಿ ಮುಖ್ಯಾಂಶಗಳುonline desk

1. ಪಹಲ್ಗಾಮ್ ದಾಳಿ: ಬೆಂಗಳೂರಿನಲ್ಲಿ ಸಂತ್ರಸ್ತರ ವಿಚಾರಣೆ ನಡೆಸಿದ NIA

ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು, ಉಗ್ರರ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಭರತ್ ಭೂಷಣ್ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನಗರದ ಮತ್ತಿಕೆರೆಯಲ್ಲಿರುವ ಭರತ್ ಭೂಷಣ್ ಅವರ ನಿವಾಸಕ್ಕೆ ರಾಷ್ಟ್ರೀಯ ತನಿಖಾ ದಳದ ನಾಲ್ವರು ಅಧಿಕಾರಿಗಳು ಭೇಟಿ ನೀಡಿದ್ದರು. 12 ಗಂಟೆಗಳ ಕಾಲ ಭರತ್ ಭೂಷಣ್ ಅವರ ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸುಜಾತ ಅವರ ಬಳಿ ಸುಮಾರು 6 ಗಂಟೆಗಳ ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಕಾಶ್ಮೀರ ಪ್ರವಾಸದ ಕುರಿತು ಪ್ರಶ್ನೆಗಳನ್ನು ಕೇಳಿದ್ದಾರೆ.

2. ವೇದಿಕೆಯಲ್ಲೇ ಸಿಎಂ ಗರಂ, ಎಎಸ್ ಪಿ ಮೇಲೆ ಕೈ ಎತ್ತಿದ ಸಿದ್ದರಾಮಯ್ಯ

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ವೇದಿಕೆ ಮೇಲೆಯೇ ಧಾರವಾಡದ ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿ ಅವರತ್ತ ಸಿಎಂ ಕೈ ಎತ್ತಿದ್ದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗತೊಡಗಿದೆ. ಬೆಲೆ ಏರಿಕೆ ವಿರೋಧಿಸಿ ಇಂದು ಕಾಂಗ್ರೆಸ್‌ ಪ್ರತಿಭಟನಾ ಸಭೆ ಆಯೋಜಿಸಿತ್ತು. ಸಿಎಂ ಮಾತನಾಡುವಾಗ ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟಿಸಿದರು. ಪಾಕ್ ಜೊತೆ ಯುದ್ಧ ಅನಿವಾರ್ಯವಲ್ಲ ಎಂಬ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ. ಈ ವೇಳೆ ಸಂಯಮ ಕಳೆದುಕೊಂಡ ಸಿಎಂ ಹೆಚ್ಚುವರಿ ಎಸ್‌ಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಏನ್ರೀ ಇದು, ಏನು ಮಾಡ್ತಾ ಇದ್ದೀರಿ ಎಂದು ಪ್ರಶ್ನಿಸಿ ಕೈ ಎತ್ತಿ ಸಿಟ್ಟು ಹೊರಹಾಕಿದ್ದಾರೆ.

3. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಗೆ ನೀರು, ಕರೆಂಟ್ ಕಟ್: ಪಾಲಿಕೆ ಶಿಸ್ತು ಕ್ರಮಕ್ಕೆ BWSSB- BESCOM ಸಾಥ್!

ಕಟ್ಟಡ ನಿರ್ಮಾಣ ಮಾಡುವಾಗ ನಿಯಮ ಉಲ್ಲಂಘಿಸಿದವರ ವಿರುದ್ಧ ಬಿಬಿಎಂಪಿ ಕೈಗೊಳ್ಳುವ ಶಿಸ್ತು ಕ್ರಮಕ್ಕೆ ಬೆಂಗಳೂರು ಜಲಮಂಡಳಿ ಮತ್ತು ಬೆಸ್ಕಾಂ ಸಾಥ್ ಕೊಡಲು ಮುಂದಾಗಿವೆ. ಅಕ್ಟೋಬರ್ 22, 2024 ರಂದು 9 ಜನರ ಸಾವಿಗೆ ಕಾರಣವಾದ ಬಾಬುಸಾಬ್ ಪಾಳ್ಯದಲ್ಲಿ ಕಟ್ಟಡದ ಕುಸಿತ ಪ್ರಕರಣ ನಂತರ, ನಿಯಮ ಉಲ್ಲಂಘಿಸಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ವಿದ್ಯುತ್ ಮತ್ತು ಒಳಚರಂಡಿ ಸಂಪರ್ಕಗಳನ್ನು ಕಡಿತಗೊಳಿಸುವಂತೆ ಲೋಕಾಯುಕ್ತರು ಸೂಚಿಸಿದ್ದರು. ಹಲವಾರು ಬಾರಿ ಮನವಿ ಮಾಡಿದ ನಂತರ ಬೆಸ್ಕಾಂ ಅಂತಿಮವಾಗಿ 2025ರ ಏಪ್ರಿಲ್ 4 ರಂದು ಸುತ್ತೋಲೆ ಹೊರಡಿಸಿದೆ. ಸೇವಾ ಸಂಪರ್ಕಕ್ಕಾಗಿ ಪ್ರಾರಂಭ ಪ್ರಮಾಣಪತ್ರ ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರ (CC/OC) ಅವಶ್ಯಕತೆಗಳನ್ನು ಕಡ್ಡಾಯಗೊಳಿಸಿತು ಬಿಬಿಎಂಪಿ ವಿನಂತಿಗಳನ್ನು ತ್ವರಿತವಾಗಿ ಅನುಸರಿಸಲು ಸ್ಥಳೀಯ ಕಚೇರಿಗಳಿಗೆ ನಿರ್ದೇಶನ ನೀಡಿದೆ ಎಂದು ಬೆಂಗಳೂರು ಒಕ್ಕೂಟದ ಸಂಚಾಲಕ ರಾಜಗೋಪಾಲನ್ ಹೇಳಿದ್ದಾರೆ.

4. ರೈಲ್ವೆ ಪರೀಕ್ಷೆಯಲ್ಲೂ ಜನಿವಾರ, ಮಂಗಳಸೂತ್ರ ವಿವಾದ!

ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಜನಿವಾರ ಮತ್ತು ಮಂಗಳಸೂತ್ರ ತೆಗೆಸಬಾರದು ಎಂದು ಅಧಿಕಾರಿಗಳಿಗೆ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಸೂಚನೆ ನೀಡಿದ್ದಾರೆ. ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು ತೆಗೆದು ಬರಬೇಕು ಎಂದು ಪ್ರವೇಶ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿವಾದ ಭುಗಿಲೇಳುತ್ತಿದ್ದಂತೆಯೇ ದಕ್ಷಿಣ ಕನ್ನಡ ಬಿಜೆಪಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, ಸಚಿವ ಸೋಮಣ್ಣ ಅವರ ಗಮನಕ್ಕೆ ತಂದಿದ್ದರು. ಇದರ ಬೆನ್ನಲ್ಲೇ ಸೋಮಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

5. ನಗರದ ರಸ್ತೆಗಳ ಸ್ಥಿತಿ ಶೋಚನೀಯ: ಡಿಸಿಎಂಗೆ ಸಂಸದ ತೇಜಸ್ವಿ ಸೂರ್ಯ ಪತ್ರ

ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳು ದಯನೀಯ ಸ್ಥಿತಿ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಡಿಕೆ ಶಿವಕುಮಾರ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಟಿಸಿಎಸ್ ವರ್ಲ್ಡ್ 10ಕೆ-2025 ಮ್ಯಾರಥಾನ್'ನ್ನು ಭಾನುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತೇಜಸ್ವಿ ಸೂರ್ಯ ಮ್ಯಾರಥಾನ್‌ ವೇಳೆ ಯಾವೆಲ್ಲಾ ಸಮಸ್ಯೆಗಳಾಯಿತು ಎಂಬುದನ್ನು ಪತ್ರದ ಮೂಲಕ ಸರ್ಕಾರಕ್ಕೆ ವಿವರಿಸಿದ್ದಾರೆ. ನಗರದ ಹೃದಯವಾಗಿರುವ ಸಿಬಿಡಿ ರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಒಂದು ಸಣ್ಣ ಸುಗಮ ರಸ್ತೆ ಕೂಡ ಇರಲಿಲ್ಲ. ಕೇವಲ 2 ತಿಂಗಳುಗಳ ಹಿಂದೆ ನಾನು ಮುಂಬಯಿಯಲ್ಲಿ ನಡೆದ ಮ್ಯಾರಥಾನ್ ನಲ್ಲಿಯೂ ಭಾಗವಹಿಸಿದ್ದು, ಅಲ್ಲಿನ ಅನುಭವ ಇಷ್ಟೊಂದು ಕಳಪೆ ಆಗಿರಲಿಲ್ಲ. ಬೆಂಗಳೂರು ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ತಾವುಗಳು ವಿಶೇಷ ಕಾಳಜಿ ವಹಿಸಲು ಈ ಮೂಲಕ ತಮ್ಮಲ್ಲಿ ಕೋರುತ್ತೇನೆಂದು ಸಂಸದರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com