News Headlines 29-04-2025 | ಹಿಂದೂ ಮಹಿಳೆಯರು ಬ್ಯಾಗ್ ನಲ್ಲಿ ಚಾಕು ಇಟ್ಕೊಳ್ಳಿ: ಕಲ್ಲಡ್ಕ ಪ್ರಭಾಕರ್ ಭಟ್ ಕರೆ; ಮಂಗಳೂರು ವೈದ್ಯೆಯಿಂದ ಭಾರತ ವಿರೋಧಿ ಪೋಸ್ಟ್; ಕ್ರಿಕೆಟ್ ಪಂದ್ಯದ ವೇಳೆ ಜಗಳ: ಯುವಕನ ಕೊಲೆ; ಜಾತಿ ಗಣತಿ ವರದಿ: ಮಧ್ಯಂತರ ಆದೇಶಕ್ಕೆ 'ಹೈ' ನಕಾರ

News Headlines 29-04-2025 | ಹಿಂದೂ ಮಹಿಳೆಯರು ಬ್ಯಾಗ್ ನಲ್ಲಿ ಚಾಕು ಇಟ್ಕೊಳ್ಳಿ: ಕಲ್ಲಡ್ಕ ಪ್ರಭಾಕರ್ ಭಟ್ ಕರೆ; ಮಂಗಳೂರು ವೈದ್ಯೆಯಿಂದ ಭಾರತ ವಿರೋಧಿ ಪೋಸ್ಟ್; ಕ್ರಿಕೆಟ್ ಪಂದ್ಯದ ವೇಳೆ ಜಗಳ: ಯುವಕನ ಕೊಲೆ; ಜಾತಿ ಗಣತಿ ವರದಿ: ಮಧ್ಯಂತರ ಆದೇಶಕ್ಕೆ 'ಹೈ' ನಕಾರ

1. ಜಾತಿ ಗಣತಿ ವರದಿ: ಮಧ್ಯಂತರ ಆದೇಶಕ್ಕೆ ಹೈ' ನಕಾರ

ಜಾತಿ ಗಣತಿ ವರದಿ ಪ್ರಶ್ನಿಸಲಾದ ಅರ್ಜಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. ಅಲ್ಲದೆ, ಆ ಸಂಬಂಧ ಏನಿದ್ದರೂ ಪ್ರತ್ಯೇಕ ಮಧ್ಯಂತರ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿದೆ. ಬೀದರ್‌ನ ಶಿವರಾಜ ಕಣಶೆಟ್ಟಿ, ಕೆ.ಸಿ. ಶಿವರಾಂ, ಬೆಂಗಳೂರಿನ ಬುಜೇಂದ್ರ, ನಟ ಮುಖ್ಯಮಂತ್ರಿ ಚಂದ್ರು ಹಾಗೂ ಬೆಂಗಳೂರಿನ ‘ಸಮಾಜ ಸಂಪರ್ಕ ವೇದಿಕೆ’ ಅಧ್ಯಕ್ಷ ಜಿ.ಎನ್‌.ಶ್ರೀಕಂಠಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯ ಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ಕಳೆದ ವಿಚಾರಣೆ ವೇಳೆ ನ್ಯಾಯಾಲಯ, ‘ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಗಣತಿ ಕುರಿತು ಸರಕಾರ ಮುಂದಿನ ವಿಚಾರಣೆ ವೇಳೆಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು ’ ಎಂದು ಸೂಚನೆ ನೀಡಿತ್ತು. ಈಗ ವಿಚಾರಣೆಯನ್ನು ನ್ಯಾಯಾಲಯ ಜು.17 ಕ್ಕೆ ಮುಂದೂಡಿದೆ.

2. ಕ್ರಿಕೆಟ್ ಪಂದ್ಯದ ವೇಳೆ ಜಗಳ: ಯುವಕನ ಕೊಲೆ

ಮಂಗಳೂರು ನಗರದ ಹೊರವಲಯದಲ್ಲಿರುವ ಕುಡುಪು ಗ್ರಾಮದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ನಡೆದ ಜಗಳ ನಡೆದಿದ್ದು, 25ಕ್ಕೂ ಹೆಚ್ಚು ಜನರ ಗುಂಪೊಂದು ಯುವಕನನ್ನು ಥಳಿಸಿ ಕೊಲೆ ಮಾಡಿದೆ. ಏಪ್ರಿಲ್ 27 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಭಟ್ರ ಕಲ್ಲುರ್ಟಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು, ಹತ್ಯೆಯಾದ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ, ಆತನ ಮೇಲೆ ಕೋಲುಗಳಿಂದ ಹಲ್ಲೆ ನಡೆಸಲಾಗಿದೆ ಎಂದರು. ದೇವಾಲಯದ ಮೈದಾನದ ಬಳಿ ಯುವಕನ ಶವ ಪತ್ತೆಯಾಗಿದ್ದು, ಆರಂಭದಲ್ಲಿ, ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಯುವಕನ ಬೆನ್ನಿನ ಮೇಲೆ ಬಲವಾದ ಹೊಡೆತದ ಗಾಯಗಳಾಗಿರುವುದು ಕಂಡುಬಂದಿದ್ದು, ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪಿನಿಂದ ನಡೆದ ಕೊಲೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ, 2023ರ ಸೆಕ್ಷನ್ 103(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

3. ಹಿಂದೂ ಮಹಿಳೆಯರು ಬ್ಯಾಗ್ ನಲ್ಲಿ ಚಾಕು ಇಟ್ಕೊಳ್ಳಿ: ಕಲ್ಲಡ್ಕ ಪ್ರಭಾಕರ್ ಭಟ್ ಕರೆ

ಹಿಂದೂ ಮಹಿಳೆಯರು ಆತ್ಮರಕ್ಷಣೆಗಾಗಿ ಬ್ಯಾಗ್‌ಗಳಲ್ಲಿ ಚಾಕು ಇಟ್ಟುಕೊಳ್ಳಿ ಎಂದು ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. ನಮಗೆ ಯಾವುದೇ ಹಾನಿಯುಂಟಾಗುವುದಿಲ್ಲ ಎಂದು ನಂಬಿದರೆ ನಾವು ನಾಶವಾಗುತ್ತೇವೆ ಎಂದು ಪ್ರಭಾಕರ್ ಭಟ್ ಜಮ್ಮು ಕಾಶ್ಮೀರದ ಪಹಲ್ಗಾಮ್‌ ದಾಳಿಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ನಾವು ಸಮರ್ಥರಾಗಿರಬೇಕು ಮತ್ತು ಒಂದು ಸಮಾಜವಾಗಿ ನಮ್ಮ ಸಾಮರ್ಥ್ಯಗಳನ್ನು ಬಲಪಡಿಸಿಕೊಳ್ಳಬೇಕು. ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ನಂಬಿಕೊಂಡರೆ, ನಾವು ನಾಶವಾಗುತ್ತೇವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿಯೂ ಅದೇ ಸಂಭವಿಸಿತು. ಸಂತ್ರಸ್ತರಲ್ಲಿ ಒಬ್ಬರು ಉಗ್ರನಿಗೆ ಕತ್ತಿ ತೋರಿಸಿದ್ದರೆ, ಆ ಕಥೆ ಬೇರೆಯೇ ಆಗಿರುತ್ತಿತ್ತು ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ.

4. ದ.ಕದಲ್ಲಿ ವೈದ್ಯೆಯಿಂದ ಭಾರತ ವಿರೋಧಿ ಪೋಸ್ಟ್

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದ್ಯೆ ಅಫೀಫಾ ಫಾತಿಮಾ ಎಂಬಾಕೆ ದೇಶ ವಿರೋಧಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಮಹಿಳಾ ಡಯಟೀಸಿಯನ್ ವಿರುದ್ಧ ಮಂಗಳೂರು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಆಕೆಯನ್ನು ವಜಾಗೊಳಿಸಿದೆ. ಆಸ್ಪತ್ರೆಯ ಹೆಚ್ಆರ್ ಆಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ. ನಾನು ಭಾರತೀಯಳು, ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದು ವೈದ್ಯೆ ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದರು. ಪಹಲ್ಗಾಮ್ ದಾಳಿ ನಂತರ ವೈದ್ಯೆ ಈ ರೀತಿ ಪೋಸ್ಟ್ ಮಾಡಿರುವುದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

5. ಮಂಡ್ಯದಲ್ಲಿ ಮತ್ತೆ ವಿಸಿ ನಾಲೆಗೆ ಬಿದ್ದ ಕಾರು: 3 ಶವ ಪತ್ತೆ 

ಕಾರೊಂದು ಮಂಡ್ಯದ ವಿಸಿ ನಾಲೆಗೆ ಬಿದ್ದಿದ್ದು, ತಂದೆ ಹಾಗೂ ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಗ್ರಾಮದ ಕುಮಾರಸ್ವಾಮಿ ಅವರ ಮಕ್ಕಳಾದ ಮಕ್ಕಳಾದ ಅಧ್ವೈತ್ ಹಾಗೂ ಅಕ್ಷತಾ ಎಂದು ಗುರುತಿಸಲಾಗಿದೆ. ಏ.16 ರಂದು ಮಕ್ಕಳ ಜೊತೆ ಕಾರಿನಲ್ಲಿ ಬೆಂಗಳೂರಿನಿಂದ ಕೆ.ಆರ್.ನಗರಕ್ಕೆ ಹೊರಟಿದ್ದರು. ಆದರೆ ಆ ಬಳಿಕ ಅವರ ಸುಳಿವು ಇರಲಿಲ್ಲ. ಏ.19ರಂದು ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com