
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದಲ್ಲಿ ಭಾರೀ ಅಲೆಗಳಿಗೆ ಸಿಲುಕಿ ಮುಳುಗಿದ ಪರಿಣಾಮ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದು, ಇಬ್ಬರನ್ನು ರಕ್ಷಿಸಲಾಗಿದೆ.
ಘಟನೆ ಬುಧವಾರ ಸಂಜೆಯ ವೇಳೆಗೆ ನಡೆದಿದ್ದು, ನಾಪತ್ತೆಯಾಗಿರುವವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರ ಪೈಕಿ ದೋಣಿ ಮಾಲೀಕ ಮನೋಹರ ಈರಯ್ಯ ಮೊಗೇರ (40) ಮತ್ತು ರಾಮ ಮಾಸ್ತಿ ಖಾರ್ವಿ (43) ಅವರನ್ನು ರಕ್ಷಿಸಿ, ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಶಿರಾಲಿ ಅಳ್ವೆಕೋಡಿ ಪ್ರದೇಶದಿಂದ ದೇಶಿ ನಿರ್ಮಿತ ದೋಣಿಯಲ್ಲಿದ್ದ ಮೀನುಗಾರರು ಅಲೆಗಳ ರಭಸಕ್ಕೆ ಮುಳುಗಿತು. ಭಟ್ಕಳಕ್ಕೆ ಸಮೀಪದ ತೆಂಗಿನಗುಂಡಿ ಬಳಿ ಈ ಅಪಘಾತ ಸಂಭವಿಸಿದೆ. ಭಾರೀ ಮಳೆ ಮತ್ತು ಹೆಚ್ಚಿನ ವೇಗದ ಗಾಳಿಯಿಂದಾಗಿ ಸಮುದ್ರಕ್ಕೆ ಇಳಿಯದಂತೆ ಐಎಂಡಿ ಎಚ್ಚರಿಕೆ ನೀಡಿತ್ತು. ಆದರೂ ಮೀನುಗಾರರು ಸಮುದ್ರಕ್ಕಿಳಿದಿದ್ದರು.
ಸುದ್ದಿ ತಿಳಿದ ತಕ್ಷಣ, ಕರಾವಳಿ ಭದ್ರತಾ ಪೊಲೀಸ್ ಪಿಎಸ್ಐ ವೀಣಾ ಚಿತ್ರಾಪುರ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಭಟ್ಕಳದ ಜಾಲಿ ಮತ್ತು ಬಂದರ್ ಪ್ರದೇಶದ ನಿವಾಸಿಗಳಾದ ಮನೋಹರ್ ಈರಯ್ಯ ಮೊಗೇರ್ ಮತ್ತು ರಾಮ ಮಾಸ್ತಿ ಖಾರ್ವಿ ಅವರನ್ನು ರಕ್ಷಿಸಿದರು. ಕಾಣೆಯಾದ ನಾಲ್ವರು ಮೀನುಗಾರರನ್ನು ಜಾಲಿ ಕೋಡಿಯ ರಾಮಕೃಷ್ಣ ಮೊಗೇರ್ (40), ಅಳ್ವೆಕೋಡಿಯ ಸತೀಶ್ ತಿಮ್ಮಪ್ಪ ಮೊಗೇರ್ (26) ಮತ್ತು ಗಣೇಶ್ ಮಂಜುನಾಥ ಮೊಗೇರ್ (27) ಮತ್ತು ಮುರ್ಡೇಶ್ವರದ ನಿಶ್ಚಿತ್ ಮೊಗೇರ್ (30) ಎಂದು ಗುರುತಿಸಲಾಗಿದೆ.
ಘಟನೆಯ ನಂತರ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದರು. ಕಾಣೆಯಾದ ಮೀನುಗಾರರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಬುಧವಾರ ಸಂಜೆ ಮತ್ತು ಗುರುವಾರ ತಡರಾತ್ರಿಯವರೆಗೆ ಮುಂದುವರೆಯಿತು.
Advertisement