News Headlines 03-08-25 | ನೀರಿಗೆ ವಿಷ ಹಾಕಿದ್ದು ಹೇಯ ಕೃತ್ಯ- ಸಿದ್ದರಾಮಯ್ಯ ಆಕ್ರೋಶ; ಪ್ರಜ್ವಲ್ ಪ್ರಕರಣ: SIT ತಂಡಕ್ಕೆ ಸಿಎಂ ಪ್ರಶಸ್ತಿ ಘೋಷಣೆ; Dharmasthala case: SIT ಮುಂದೆ ಮತ್ತೊಬ್ಬ ಸಾಕ್ಷಿ ಹಾಜರು!

News Headlines 03-08-25 | ನೀರಿಗೆ ವಿಷ ಹಾಕಿದ್ದು ಹೇಯ ಕೃತ್ಯ- ಸಿದ್ದರಾಮಯ್ಯ ಆಕ್ರೋಶ; ಪ್ರಜ್ವಲ್ ಪ್ರಕರಣ: SIT ತಂಡಕ್ಕೆ ಸಿಎಂ ಪ್ರಶಸ್ತಿ ಘೋಷಣೆ; Dharmasthala case: SIT ಮುಂದೆ ಮತ್ತೊಬ್ಬ ಸಾಕ್ಷಿ ಹಾಜರು!

1. ಮುಸ್ಲಿಂ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಒತ್ತಾಯಿಸಲು ನೀರಿಗೆ ವಿಷ: ಶ್ರೀರಾಮಸೇನೆ ಮುಖಂಡನ ಬಂಧನ

ಬೆಳಗಾವಿ ಜಿಲ್ಲೆಯ ಹುಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಸ್ಲಿಂ ಮುಖ್ಯೋಪಾಧ್ಯಾಯರ ವರ್ಗಾವಣೆಗೆ ಒತ್ತಾಯಿಸಲು ಕುಡಿಯುವ ನೀರಿನಲ್ಲಿ ವಿಷ ಬೆರೆಸಿದ ಘಟನೆ ಬಹಿರಂಗಗೊಂಡಿದೆ. ಈ ಸಂಬಂಧ ಶ್ರೀರಾಮ ಸೇನೆಯ ತಾಲ್ಲೂಕು ಅಧ್ಯಕ್ಷ ಸಾಗರ್ ಪಾಟೀಲ್ ಮತ್ತು ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಷ ಬೆರಿಸಿದ ನೀರು ಸೇವಿಸಿ ಹಲವು ಮಕ್ಕಳು ಅಸ್ವಸ್ಥರಾಗಿದ್ದರು. ಈ ಪ್ರಕರಣದ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಇದು ಧಾರ್ಮಿಕ ದ್ವೇಷ ಮತ್ತು ಮೂಲಭೂತವಾದದಿಂದ ನಡೆಸಲ್ಪಟ್ಟ 'ಹೇಯ ಕೃತ್ಯ' ಎಂದು ಕರೆದಿದ್ದಾರೆ. ಧಾರ್ಮಿಕ ಮೂಲಭೂತವಾದ, ಕೋಮುವೈಷಮ್ಯ ಎನ್ನುವುದು ಎಂತಹ ಹೀನ ಕೃತ್ಯವನ್ನೂ ಮಾಡಿಸಬಲ್ಲುದು ಎಂಬುದಕ್ಕೆ ಪುಟ್ಟಮಕ್ಕಳ ಮಾರಣಹೋಮಕ್ಕೆ ಕಾರಣವಾಗಬಹುದಾಗಿದ್ದ ಈ ಘಟನೆಯೇ ಸಾಕ್ಷಿ. ಎಂದು ಹೇಳಿದ್ದಾರೆ.

2. Prajwal revanna ಜೀವಾವಧಿ ಶಿಕ್ಷೆ: SIT ತಂಡಕ್ಕೆ ಸಿಎಂ ಪ್ರಶಸ್ತಿ

ಮನೆಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿತ್ತು. ಈ ಪ್ರಕರಣದಲ್ಲಿ ವೇಗವಾಗಿ ತನಿಖೆ ಮಾಡಿ ಚಾರ್ಜ್ ಶೀಟ್ ಸಲ್ಲಿಸಿ ಪ್ರಕರಣದ ವಿಚಾರಣೆಗೆ ವೇಗ ತಂದುಕೊಟ್ಟ ಎಸ್ಐಟಿ ತಂಡವನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲದೆ ಆ ತಂಡಕ್ಕೆ ಸಿಎಂ ಪದಕ ನೀಡಲಾಗುತ್ತದೆ ಎಂದು ಘೋಷಿಸಿದರು. ಇನ್ನು ಜೈಲುಹಕ್ಕಿಯಾಗಿರುವ ಪ್ರಜ್ವಲ್ ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಮವಸ್ತ್ರ, ಕೈದಿ ಸಂಖ್ಯೆ ನೀಡಲಾಗಿದೆ. ಆಜೀವ ಜೈಲು ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್‌ ರೇವಣ್ಣ ನಿಯಮಗಳಂತೆ ಜೈಲಿನ ಒಳಗೆ 8 ಗಂಟೆ ಕೆಲಸ ಮಾಡಬೇಕು. ಅಪರಾಧಿ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡ ನೀಡಲಾಗುತ್ತದೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣರ ಸೆಕ್ಸ್ ಪೆನ್ ಡ್ರೈವ್ ಹಂಚಿಕೆ ಕುರಿತಂತೆ ಪೊಲೀಸರು 100 ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದು ಮುಂದಿನ ಎರಡು ವಾರದಲ್ಲಿ ಪೆನ್‌ಡ್ರೈವ್ ಹಂಚಿಕೆ ಮಾಡಿದ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.

3. Dharmasthalacase: SIT ಮುಂದೆ ಮತ್ತೊಬ್ಬ ಸಾಕ್ಷಿ ಹಾಜರು

ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ನಡೆದಿರುವ ಹುಡುಗಿಯ ಅನುಮಾನಾಸ್ಪದ ಸಾವಿನ ಬಗ್ಗೆ ದೂರು ದಾಖಲಿಸಲು ಮತ್ತು ತನಿಖಾ ತಂಡಕ್ಕೆ ನಿರ್ಣಾಯಕ ಸಾಕ್ಷ್ಯವನ್ನು ನೀಡಲು ಹೊಸ ಸಾಕ್ಷಿಯೊಬ್ಬರು ಎಸ್‌ಐಟಿ ಮುಂದೆ ಹಾಜರಾಗಿದ್ದು ತಾವು ಹುಡುಗಿಯೊಬ್ಬಳ ಶವವನ್ನು ನೋಡಿದ್ದು ಆ ಶವವನ್ನು ಕಾನೂನು ವಿಧಾನಗಳನ್ನು ಅನುಸರಿಸದೆ ಹೂಳಲಾಗಿದೆ. ಆಕೆಯ ಸಮಾಧಿ ಸ್ಥಳ ನನಗೆ ಗೊತ್ತು ತೋರಿಸುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತರೂ ಆಗಿರುವ ಜಯನ್ ಎಂಬುವರು SITಗೆ ತಿಳಿಸಿದ್ದಾರೆ. ಇದೇ ವೇಳೆ, ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳ ಪತ್ತೆಗೆ GPR ಬಳಕೆ ಮಾಡುವಂತೆ ನಾಪತ್ತೆಯಾಗಿರುವ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ತಾಯಿ ಸುಜಾತಾ ಭಟ್ ಪರ ವಕೀಲರು ಒತ್ತಾಯಿಸಿದ್ದಾರೆ. ಅಸ್ಥಿಪಂಜರಗಳ ಪತ್ತೆಗೆ ಅತ್ಯಾಧುನಿಕ GROUND PENETRATING RADAR ಬಳಸುವಂತೆ ವಕೀಲರು ಮನವಿ ಮಾಡಿದ್ದಾರೆ.

4. ಆ.10ರಂದು Namma metro ಹಳದಿ ಮಾರ್ಗ ಉದ್ಘಾಟನೆ

ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಆಗಸ್ಟ್​ 10ರಂದು ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಘೋಷಿಸಿದ್ದಾರೆ. ಮೆಟ್ರೋ ಹಳದಿ ಮಾರ್ಗದಿಂದಾಗಿ ಸುಮಾರು ಎಂಟು ಲಕ್ಷ ಪ್ರಯಾಣಿಕರಿಗೆ ಪ್ರಯೋಜನವಾಗಲಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಬೆಂಗಳೂರಿನ ಸಂಚಾರ ಸಮಸ್ಯೆಗಳಿಗೆ ಸಾರ್ವಜನಿಕ ಸಾರಿಗೆ ಮಾತ್ರ ದೀರ್ಘಕಾಲೀನ ಪರಿಹಾರವಾಗಿದ್ದು, ಈ ಮಾರ್ಗವನ್ನು ಯಾವುದೇ ವಿಳಂಬವಿಲ್ಲದೆ ಸಾರ್ವಜನಿಕರಿಗೆ ಮುಕ್ತವಾಗಿಸಲು ಮೋದಿಯವರ ವೈಯಕ್ತಿಕ ಪ್ರಯತ್ನವೇ ಸಕಾಲಿಕ ಉದ್ಘಾಟನೆಗೆ ಕಾರಣ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

5. ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕ ಅತ್ಯಾಚಾರವೆಸಗಿರುವಂತಹ ಘಟನೆ ನಡೆದಿದೆ. ಅತ್ಯಾಚಾರ ಸಂಬಂಧ ಸಂತ್ರಸ್ತೆ ಸೋಲದೇವನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದು ದೂರಿನ ಆಧಾರದ ಮೇಲೆ ಪಿಜಿ ಮಾಲೀಕ ಅಶ್ರಫ್ನನ್ನು ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿಯಲ್ಲಿರುವ ಪಿಜಿ ಒಂದಕ್ಕೆ ವಿದ್ಯಾರ್ಥಿನಿ ಸೇರಿ ಕೇವಲ 10 ದಿನ ಆಗಿತ್ತು. ಶನಿವಾರ ತಡರಾತ್ರಿ ಅಶ್ರಫ್ ಕಾರಿನಲ್ಲಿ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com