
ಬೆಂಗಳೂರು: ಕೃಷ್ಣರಾಜ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪರ ಹಾಗೂ ವಿರುದ್ದದ ಅಭಿಪ್ರಾಯಗಳು ಕೇಳಿಬರುತ್ತಿವೆ.
ಈ ನಡುವೆ ಟಿಪ್ಪು ಸುಲ್ತಾನ್ KRSಗೆ 'ಆಧಾರ ಶಿಲೆ' ಎನ್ನಬಹುದು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಮೈಸೂರು ಮೂಲದ ಟಿಪ್ಪು ಸಂಶೋಧಕ ಪ್ರೊಫೆಸರ್ ಗುರುಸಿದ್ಧಯ್ಯ ಅವರ ಮಾತುಗಳ ಪ್ರಕಾರ, ಶಾಸನಗಳ ಆಧಾರದಲ್ಲಿ ಟಿಪ್ಪು ಸುಲ್ತಾನ್ ಇವತ್ತಿನ KRS ಅಣೆಕಟ್ಟು ಇರುವ ಸ್ಥಳದ ಬಳಿ ಅಣೆಕಟ್ಟು ಕಟ್ಟುವ ಉದ್ದೇಶ ಹೊಂದಿದ್ದರು ಅನ್ನೋದು ಗೊತ್ತಾಗುತ್ತದೆ ಎಂದಿದ್ದಾರೆ.
ಟಿಪ್ಪು ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸಲ್ಲವಾದರೂ, ಇವತ್ತಿನ ಅಣೆಕಟ್ಟು ಅದೇ ಸುತ್ತಮುತ್ತಲಿನ ಸ್ಥಳದಲ್ಲಿ ನಿರ್ಮಾಣವಾಗಿರುವುದರಿಂದ ಅವರನ್ನೂ KRSಗೆ 'ಆಧಾರ ಶಿಲೆ' ಎನ್ನಬಹುದು ಎಂದು ಬರೆದುಕೊಂಡಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಹೆಚ್.ಸಿ. ಮಹದೇವಪ್ಪ, ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಕೆಆರ್ಎಸ್ ಗೇಟ್ನ ಹೆಬ್ಬಾಗಿಲಿನಲ್ಲಿ ಈಗಲೂ ಅಡಿಗಲ್ಲು ಇದ್ದು ಈ ಸತ್ಯವನ್ನು ಹೇಳಲು ಯಾರಿಗೂ ಧೈರ್ಯ ಇಲ್ಲ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದರಲ್ಲಿ ತಪ್ಪೇನಿಲ್ಲ ಎಂದು ಚೇತನ್ ಅಹಿಂಸಾ ಹೇಳಿದ್ದರು.
Advertisement