
ಬೆಂಗಳೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಕೆಕೆಆರ್‌ಟಿಸಿ) ಮತ್ತು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ(ಎನ್‌ಡಬ್ಲ್ಯೂಕೆಆರ್‌ಟಿಸಿ)ಯ ನೌಕರರು ಮಂಗಳವಾರ ಬೆಳಗ್ಗೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಹಲವು ಕಡೆ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗೆ ಇಳಿಯದ ಕಾರಣ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.
ಮುಷ್ಕರದಿಂದಾಗಿ ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್), ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಶಾಂತಿನಗರ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಪರದಾಡುತ್ತಿದ್ದರು.
ಬಿಎಂಟಿಸಿ ಬಸ್‌ಗಳಿಲ್ಲದೆ ಜನ ಆಟೋ ಚಾಲಕರಿಗೆ ಅವರು ಕೇಳಿದಷ್ಟು ಹಣ ನೀಡುತ್ತಿದ್ದಾರೆ. ಆಸ್ಪತ್ರೆ ತಪಾಸಣೆ ಮತ್ತು ಇತರೆ ಅನಿವಾರ್ಯ ಕೆಲಸಗಳಿಗೆ ತೆರಳಲು ಜನ ಆಟೋಗಳಿಗೆ ದುಬಾರಿ ಶುಲ್ಕ ಪಾವತಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎನ್ನುತ್ತಿದ್ದಾರೆ.
ಬೆಂಗಳೂರಿನಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ಭಾಗಶಃ ತಟ್ಟಿದೆ. ಹಲವೆಡೆ ಬಸ್‌ಗಳು ಸಂಚರಿಸುತ್ತಿವೆ. ಏರ್ಪೋರ್ಟ್ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಯಶವಂತಪುರ ಬಸ್ ನಿಲ್ದಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ.
ಸರ್ಕಾರಿ ಬಸ್‌ಗಳಿಲ್ಲದ ಕಾರಣ ಅನೇಕ ಮಹಿಳಾ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶಕ್ತಿ ಯೋಜನೆಯಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಮಹಿಳೆಯರು ಇಂದು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ನೂರಾರು ರೂಪಾಯಿ ಪಾವತಿಸಬೇಕಿದೆ. ಹಾಸನಕ್ಕೆ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆ 400 ರೂ. ಮತ್ತು ಬಳ್ಳಾರಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ತಲಾ 600 ರೂ. ಪಾವತಿಸಿದ್ದಾರೆ. ಟಿಕೆಟ್‌ಗೆ ಹಣ ಪಾವತಿಸಲು ಬಯಸದ ಕೆಲವು ಮಹಿಳಾ ಪ್ರಯಾಣಿಕರು ವಾಪಸ್ ಮನೆಗೆ ಹೋಗುತ್ತಿರುವ ನಿದರ್ಶನಗಳು ಕಂಡುಬಂದವು.
ಮುಂದಿನ ಕ್ರಮ ಕೈಗೊಳ್ಳಲು ಜೆಎಸಿ ಸಭೆ
ಮುಂದಿನ ಕ್ರಮ ಮತ್ತು ಮುಷ್ಕರವನ್ನು ಮುಂದೂಡಲು ಆದೇಶಿಸಿದ ಹೈಕೋರ್ಟ್ ನಿರ್ದೇಶನದ ಕುರಿತು ಚರ್ಚಿಸಲು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಜೆಎಸಿ)ಗೆ ಸದಸ್ಯರು ಇಂದು ಮಧ್ಯಾಹ್ನ ಸಭೆ ಕರೆದಿದ್ದಾರೆ. ಒಕ್ಕೂಟದ ಅಧ್ಯಕ್ಷ ಎಚ್.ವಿ. ಅನಂತ ಸುಬ್ಬರಾವ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.
ಯಾರೂ ಕಾನೂನಿಗಿಂತ ದೊಡ್ಡವರಲ್ಲ ಮತ್ತು ಅವರು(ಜೆಎಸಿ) ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಸರ್ಕಾರ ಖಾಸಗಿ ವಾಹನಗಳನ್ನು ನಿಯೋಜಿಸುತ್ತಿದೆ. ನಮ್ಮ ಮೆಟ್ರೋಗೆ ಟ್ರಿಪ್ ಹೆಚ್ಚಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಅನ್ನು ವಿನಂತಿಸಲಾಗಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ.
ಇನ್ನು ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, "ಸಿದ್ದರಾಮಯ್ಯ ನಿದ್ರೆಯಿಂದ ಎಚ್ಚರಗೊಂಡು ಈ ಸಮಸ್ಯೆಯನ್ನು ಪರಿಹರಿಸಬೇಕು. ಅದನ್ನು ಪರಿಹರಿಸಲು ಅವರಿಗೆ ಸಾಧ್ಯವಾಗದಿದ್ದರೆ, ರಾಜೀನಾಮೆ ನೀಡಿ ಹೋಗಬೇಕು" ಎಂದರು.
Advertisement