2024ರ ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಇಂದು ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಸ್ಫೋಟಕ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಹಿರಂಗಪಡಿಸಿದ ರಾಹುಲ್ ಗಾಂಧಿ, ಭಾರತೀಯ ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದರು. ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರವೊಂದರಲ್ಲೇ 6.5 ಲಕ್ಷ ಒಟ್ಟು ಮತಗಳ ಪೈಕಿ 1 ಲಕ್ಷಕ್ಕೂ ಹೆಚ್ಚು ನಕಲಿ ಮತ ಚಲಾವಣೆಯಾಗಿದೆ ಎಂದು ಆರೋಪಿಸಿದರು. ಇನ್ನು ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು, ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲೆಗಳಿಗೆ ಸಹಿ ಮಾಡಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದ್ದಾರೆ. ತಪ್ಪು ಅಥವಾ ಆಧಾರರಹಿತ ಮಾಹಿತಿಯನ್ನು ಒದಗಿಸಿದರೆ, ಸೆಕ್ಷನ್ 31 ಆರ್‌ಪಿ ಆಕ್ಟ್ 1950 ಮತ್ತು ಸೆಕ್ಷನ್ 227 BNS ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಧರ್ಮಸ್ಥಳದ ಪರಿಸರದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆಪಾದಿಸಿ ಸ್ಥಳಗಳನ್ನು ತೋರಿಸುತ್ತಿರುವ ಅನಾಮಿಕ ವ್ಯಕ್ತಿಯನ್ನು SIT ವಶದಲ್ಲಿ ಇರಿಸಿಕೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಶ್ಯಾಮ್ ಸುಂದರ್ ಎಂಬವರು ತನಿಖಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಎಸ್ ಐಟಿಗೆ ಪತ್ರ ಬರೆದಿರುವ ಶ್ಯಾಮ್ ಸುಂದರ್, ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಬಗ್ಗೆ ಸ್ಥಳೀಯ ವ್ಯಕ್ತಿಯಾಗಿರುವ ನನಗೆ ಕಳವಳವಿದೆ ಎಂದು ಪತ್ರ ಬರೆದಿದ್ದಾರೆ. ಈ ಮಧ್ಯೆ ಆ ಅರ್ಜಿಯನ್ನು ಸ್ವೀಕರಿಸಿದ್ದು, ಈ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಐಟಿ ತಿಳಿಸಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ರಹಸ್ಯವಾಗಿ ಹೂತುಹಾಕಲಾದ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ, ಹೂತುಹಾಕಲಾಗಿರುವ ಶವಗಳ ಅವಶೇಷಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಭೂಮಿಯ ಒಳಭಾಗವನ್ನು ಸಮೀಕ್ಷೆ ಮಾಡಲು ಜಿಪಿಆರ್ ತಂತ್ರಜ್ಞಾನ ಬಳಸಲು SIT ತಜ್ಞರ ಅಭಿಪ್ರಾಯ ಪಡೆಯಲಿದೆ. ಬೆಂಗಳೂರಿನಿಂದ GPR ನಾಳೆ ಬರುವ ನಿರೀಕ್ಷೆಯಿದೆ. ಈಗ ಸ್ಥಳ 13ರ ಮೇಲೆ ಮಾತ್ರ ಗಮನಹರಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧರ್ಮಸ್ಥಳದ ನೇತ್ರಾವತಿಯ ಪಾಂಗಲ ಬಳಿ ಯೂಟ್ಯೂಬರ್‌ಗಳ ಮೇಲೆ ದುಷ್ಕರ್ಮಿಗಳ ಗುಂಪೊಂದು ನಿನ್ನೆ ಸಂಜೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ. ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದ ಘಟನೆಯನ್ನು ವರದಿ ಮಾಡಲು ಹೋಗಿದ್ದ ಸುದ್ದಿವಾಹಿನಿಯ ಇಬ್ಬರು ವರದಿಗಾರರ ಮೇಲೆ ಕೂಡ ದಾಳಿಯಾಗಿದ್ದು. ಈ ಘಟನೆಯ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ಎಂಡಿ, ಮಹೇಶ್ ತಿಮರೋಡಿ ಸೇರಿದಂತೆ ನಾಲ್ವರ ವಿರುದ್ಧ FIR ದಾಖಲಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ ಹರೀಶ್ ಎಂಬುವವರು ನೀಡಿದ ದೂರಿನಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದೂರುಗಳು ಮತ್ತು ಪ್ರತಿದೂರುಗಳು ದಾಖಲಾಗಿದ್ದು, ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದಾರೆ.
ಮಾಜಿ ಸಚಿವ ಬಿಜೆಪಿ ಸಂಸದ ಸುಧಾಕರ್ ಹೆಸರನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿ ಕಾರು ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಬಾಪೂಜಿನಗರದ ನಿವಾಸಿ ಬಾಬು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಒ ಕಾರು ಚಾಲಕನಾಗಿದ್ದ ಬಾಬು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯತಿ ಸಭಾಂಗಣದ ಹಿಂಭಾಗದಲ್ಲಿರುವ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಸಂಸದ ಡಾ ಕೆ ಸುಧಾಕರ್ ಕಾರಣ. ಚಿಕ್ಕಕಾಡಿಗಾನಹಳ್ಳಿ ನಾಗೇಶ್ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ 25 ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾರೆ. ಇನ್ನೂ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದಲ್ಲಿ ರಾಜಕೀಯ ಒತ್ತಡವಿಲ್ಲದೆ ತನಿಖೆ ಆಗಲಿದೆ ಎಂದು ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್ ತಿಳಿಸಿದ್ದಾರೆ.
ಲಾಲ್ ಬಾಗ್ ನ 218ನೇ ವಾರ್ಷಿಕ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದರು. ಈ ಪ್ರದರ್ಶನವು ಮಹಾನ್ ಐತಿಹಾಸಿಕ ವ್ಯಕ್ತಿಗಳಾದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನವರ ವಿಷಯಾಧಾರಿತವಾಗಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದ 110 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಮೀಸಲಿಟ್ಟಿದೆ ಎಂದು ಸಿಎಂ ಹೇಳಿದರು.
Advertisement