ಮತಗಳ್ಳತನ ಆರೋಪ: ಅಫಿಡವಿಟ್ ನೊಂದಿಗೆ ದಾಖಲೆ ಸಲ್ಲಿಸಿ; ರಾಹುಲ್ ಗಾಂಧಿಗೆ ಕರ್ನಾಟಕ CEO ಸೂಚನೆ

ಇಂದು ಸಂಜೆಯೊಳಗೆ ರಾಹುಲ್ ಗಾಂಧಿಯವರು ಸಹಿ ಮಾಡಿದ ದಾಖಲೆಗಳನ್ನು ಸಲ್ಲಿಸುತ್ತಾರೆ ಎಂದು ನಿರೀಕ್ಷಿಸುತ್ತಿರುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
Rahul Gandhi
ರಾಹುಲ್ ಗಾಂಧಿ
Updated on

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ "ಮತಗಳ್ಳತನ" ನಡೆದಿದೆ ಎಂದು ಗಂಭೀರ ಆರೋಪ ಮಾಡಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ, ಸಹಿ ಮಾಡಿದ ಅಫಿಡವಿಟ್ ನೊಂದಿಗೆ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಗುರುವಾರ ಕಾಂಗ್ರೆಸ್ ನಾಯಕನಿಗೆ ಸೂಚಿಸಿದ್ದಾರೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮತಗಳ್ಳತನದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ ನಂತರ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿರುವ ರಾಜ್ಯ ಚುನಾವಣಾ ಅಧಿಕಾರಿ, ರಾಷ್ಟ್ರ ರಾಜಧಾನಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ, "ನೀವು ಅನರ್ಹ ಮತದಾರರ ಸೇರ್ಪಡೆ ಮತ್ತು ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿರುವ ಬಗ್ಗೆ ಉಲ್ಲೇಖಿಸಿದ್ದೀರಿ... ಆ ಕುರಿತ ದಾಖಲೆಗಳನ್ನು ಚುನಾವಣಾ ಆಯೋಗದೊಂದಿಗೆ ಹಂಚಿಕೊಳ್ಳಿ" ಎಂದು ಹೇಳಿದ್ದಾರೆ.

"1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(b) ಅಡಿಯಲ್ಲಿ ಲಗತ್ತಿಸಲಾದ ಸಾಕ್ಷ್ಯಾಧಾರಿತ ಪ್ರಮಾಣಪತ್ರಕ್ಕೆ ಸಹಿ ಹಾಕಿದ ದಾಖಲೆಗಳನ್ನು ಸಲ್ಲಿಸಿ. ಇದರಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದು" ಎಂದು ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನೀವು ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಅಕ್ರಮವಾಗಿ ಸೇರಿಸಲಾಗಿರುವ ಅಥವಾ ಅಳಿಸಲಾಗಿರುವ ಮತದಾರರ ಹೆಸರು, ಚುನಾವಣಾ ಐಡಿ ನಂಬರ್ ಮತ್ತು ಮತದಾರರ ಪಟ್ಟಿಯ ಸೀರಿಯಲ್ ನಂಬರ್‌ನಂತಹ ವಿವರಗಳನ್ನು ಒಳಗೊಂಡಿರಬೇಕು. ಈ ಮಾಹಿತಿಯನ್ನು ಒದಗಿಸಿದರೆ ಮಾತ್ರ ಮುಂದಿನ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ, ತಪ್ಪು ಅಥವಾ ಆಧಾರರಹಿತ ಮಾಹಿತಿಯನ್ನು ಒದಗಿಸಿದರೆ, ಸೆಕ್ಷನ್ 31 ಆರ್‌ಪಿ ಆಕ್ಟ್ 1950 ಮತ್ತು ಸೆಕ್ಷನ್ 227 ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Rahul Gandhi
Watch | ಕರ್ನಾಟಕದಲ್ಲಿ "ಮತಗಳ್ಳತನ"; ರಾಹುಲ್‌ ಗಾಂಧಿ ದಾಖಲೆ ಬಿಡುಗಡೆ

ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳುವಂತೆ, ಕರ್ನಾಟಕದ ಒಂದು ಕ್ಷೇತ್ರದಲ್ಲಿ 1,00,250 ಮತಗಳ "ವೋಟ್ ಚೋರಿ" ಆಗಿದೆ, ಒಂದು ವಿಧಾನಸಭಾ ಕ್ಷೇತ್ರದಲ್ಲಿ 11,965 ನಕಲಿ ಮತದಾರರಿದ್ದಾರೆ. ಮಹದೇವಪುರದಲ್ಲಿ ನಕಲಿ ವಿಳಾಸಗಳನ್ನು ಹೊಂದಿರುವ ‘40,009’ ಮತದಾರರಿದ್ದಾರೆ. ‘ಮನೆ ಸಂಖ್ಯೆ 0’ ಎಂಬ ಅಡ್ರೆಸ್ ಇರುವ ಹಲವರು ನೋಂದಾಯಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ, 46 ಮತದಾರರು ಒಂದೇ ರೂಮಿನ ವಿಳಾಸದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ.

ಇಂದು ಸಂಜೆಯೊಳಗೆ ರಾಹುಲ್ ಗಾಂಧಿಯವರು ಸಹಿ ಮಾಡಿದ ದಾಖಲೆಗಳನ್ನು ಸಲ್ಲಿಸುತ್ತಾರೆ ಎಂದು ನಿರೀಕ್ಷಿಸುತ್ತಿರುವುದಾಗಿ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com