Dk Shivakumar
ದೊಡ್ಡತೋಗೂರಿನ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್

ಬೆಂಗಳೂರು ನಗರದಲ್ಲಿದ್ದೇವೆ ಎಂಬ ಹಿರಿಮೆ ನಿಮಗೂ ಇರಬೇಕು; ಪಕ್ಷಬೇಧ ಮರೆತು ನನಗೆ ಆಶೀರ್ವದಿಸಿ: ಡಿ.ಕೆ ಶಿವಕುಮಾರ್

ನಾನು ಈ ಕ್ಷೇತ್ರವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಪಕ್ಕದಲ್ಲೇ ಎಲೆಕ್ಟ್ರಾನಿಕ್ ಸಿಟಿ ಇದೆ. ಈ ಭಾಗದಲ್ಲಿ ಸರಿಯಾಗಿ ತೆರಿಗೆ ಪಾವತಿಯಾಗುತ್ತಿಲ್ಲ ಎಂದು ಇಲ್ಲಿನ ಶಾಸಕರಾದ ಕೃಷ್ಣಪ್ಪ ಅವರೂ ಸೇರಿದಂತೆ ಅನೇಕರು ದೂರು ನೀಡಿದ್ದಾರೆ.
Published on

ಬೆಂಗಳೂರು: ಸದ್ಯಕ್ಕೆ ದೊಡ್ಡತೋಗೂರು ಪಟ್ಟಣ ಪಂಚಾಯ್ತಿ ಎಂದು ಇರುವ ನಾಮಫಲಕ ಬೆಂಗಳೂರು ದಕ್ಷಿಣ ಪಾಲಿಕೆ ಎಂದು ಶೀಘ್ರದಲ್ಲೇ ಬದಲಾಗಲಿದೆ ಎಂಬ ವಿಶ್ವಾಸ ನನಗಿದೆ. ಬೆಂಗಳೂರು ನಗರ ಪ್ರದೇಶದಲ್ಲಿರುವ ನೀವು ಎಲ್ಲಾ ಮೂಲಭೂತ ಸೌಕರ್ಯ ಪಡೆಯಲು ಅರ್ಹರಿದ್ದೀರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬೆಂಗಳೂರು ದಕ್ಷಿಣ ತಾಲ್ಲೂಕಿನ ದೊಡ್ಡತೋಗೂರು ಪಟ್ಟಣ ಪಂಚಾಯಿತಿ ಕಚೇರಿ ನೂತನ ಕಟ್ಟಡ ಶಂಕುಸ್ಥಾಪನೆ ಸಮಾರಂಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ಮಾತನಾಡಿದರು. ಬೆಂಗಳೂರು ನಗರದಲ್ಲಿದ್ದೇವೆ ಎಂಬ ಹಿರಿಮೆ ನಿಮಗೂ ಇರಬೇಕು. ಈ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ 28 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಅನುಮತಿ ನೀಡಿದ್ದೇನೆ ಎಂದು ತಿಳಿಸಿದರು.

ನಾನು ಈ ಕ್ಷೇತ್ರವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಪಕ್ಕದಲ್ಲೇ ಎಲೆಕ್ಟ್ರಾನಿಕ್ ಸಿಟಿ ಇದೆ. ಈ ಭಾಗದಲ್ಲಿ ಸರಿಯಾಗಿ ತೆರಿಗೆ ಪಾವತಿಯಾಗುತ್ತಿಲ್ಲ ಎಂದು ಇಲ್ಲಿನ ಶಾಸಕರಾದ ಕೃಷ್ಣಪ್ಪ ಅವರೂ ಸೇರಿದಂತೆ ಅನೇಕರು ದೂರು ನೀಡಿದ್ದಾರೆ. ನಮ್ಮ ಸರ್ಕಾರ ಬೆಂಗಳೂರಿಗೆ ಹೊಸ ರೂಪ ನೀಡುತ್ತಿದೆ. ಗ್ರೇಟರ್ ಬೆಂಗಳೂರು ಸೇರಿದಂತೆ ಯಾವುದೇ ಅಭಿವೃದ್ದಿ ಕೆಲಸಗಳನ್ನು ಚುನಾವಣಾ ದೃಷ್ಟಿಯಿಂದ ಮಾಡುತ್ತಿಲ್ಲ. ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕ ಅಂಗೀಕಾರವಾಗಿದೆ. ಇದರಡಿ ಐದು ಪಾಲಿಕೆ ಮಾಡಲು ತೀರ್ಮಾನಿಸಲಾಗಿದ್ದು, ಇವುಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಚುನಾವಣೆ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ಅಕ್ಟೋಬರ್ 31 ರ ಹೊತ್ತಿಗೆ ಪಾಲಿಕೆಗಳಲ್ಲಿ ಎಷ್ಟು ವಾರ್ಡ್ ಗಳು ಇರಬೇಕು ಎಂಬುದು ಸೇರಿದಂತೆ ಅಂತಿಮ ರೂಪುರೇಷೆ ನಿರ್ಧಾರವಾಗುತ್ತದೆ. ಈ ಮಧ್ಯೆ ಶಾಸಕರು ಹಾಗೂ ನಮ್ಮ ಮುಖಂಡರು ಈ ಭಾಗವನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಇದು ಬಹಳ ಅವಶ್ಯವಾಗಿದೆ. ಆನೇಕಲ್ ಶಾಸಕ ಶಿವಣ್ಣ, ರಮೇಶ್ ಹಾಗೂ ಮಾಜಿ ಸಂಸದ ಸುರೇಶ್ ಅವರು ಅನೇಕ ಬಾರಿ ನನ್ನ ಬಳಿ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಈಗಾಗಲೇ ನೀಲನಕ್ಷೆ ರೂಪಿಸಿದ್ದೇವೆ ಎಂದರು.

Dk Shivakumar
ನವೆಂಬರ್ 1ರ ಒಳಗಾಗಿ GBA ಪಾಲಿಕೆಗಳ ಚುನಾವಣೆ; ಪೂರ್ವಭಾವಿ ಸಿದ್ಧತೆ: ಡಿ.ಕೆ ಶಿವಕುಮಾರ್

ನಿಮ್ಮ ಭಾಗದಲ್ಲೂ ಶೀಘ್ರದಲ್ಲೇ ಚುನಾವಣೆ ಮಾಡಲಾಗುವುದು. ಪಾಲಿಕೆಗಳು ಹಾಗೂ ಈ ಹೊಸ ಪಟ್ಟಣ ಪಂಚಾಯ್ತಿ ಇನ್ನು ಮುಂದೆ ಜೊತೆಯಾಗಿ ಸಮಾನವಾಗಿ ಮುಂದೆ ಸಾಗಬೇಕು. ಮುಂದೆ ನಿಮ್ಮನ್ನು ಬೆಂಗಳೂರು ದಕ್ಷಿಣ ವ್ಯಾಪ್ತಿಯ ಪಾಲಿಕೆಗೆ ಸೇರಿಸಿಕೊಳ್ಳಲಾಗುತ್ತದೆ. ನಿಮ್ಮನ್ನು ದೂರ ಇಡಲು ಆಗುವುದಿಲ್ಲ ಎಂದು ಹೇಳಿದರು.

“ನೀರಿನ ವಿಚಾರದಲ್ಲಿ ಸುರೇಶ್ ಅವರು ಈಗಾಗಲೇ ಪ್ರಸ್ತಾವನೆ ಮಾಡಿ ಅನುಮೋದನೆ ಕೊಡಿಸಿದ್ದಾರೆ. ಶಾಸಕರಾದ ಕೃಷ್ಣಪ್ಪ, ರಮೇಶ್, ಗೋಪಿನಾಥ್, ರಾಮೋಜಿ ಗೌಡ ಅವರು ಸೇರಿದಂತೆ ಎಲ್ಲರೂ ನೀರು ಪೂರೈಕೆಗೆ ಒತ್ತಾಯ ಮಾಡಿದ್ದು, ಮುಂದಿನ ಒಂದು ವಾರದಲ್ಲಿ ಸಭೆ ಮಾಡಿ ನಿಮಗೆ ಹೇಗೆ ಕಾವೇರಿ ನೀರನ್ನು ಹಂಚಬೇಕು ಎಂದು ತೀರ್ಮಾನ ಮಾಡಲಾಗುವುದು” ಎಂದರು.

“ಇಲ್ಲಿನ ಜನಸಂಖ್ಯೆಗೂ ಮತದಾರರ ಪಟ್ಟಿ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಮುಂದೆ ಪ್ರಾಮಾಣಿಕವಾಗಿ ಇದನ್ನು ಸರಿಮಾಡಿಕೊಳ್ಳೋಣ. ಇದೇ ತಿಂಗಳು 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಭಾಗಕ್ಕೆ ಆಗಮಿಸುತ್ತಿದ್ದು, ಹಳದಿ ಮಾರ್ಗ ಉದ್ಘಾಟನೆಯಾಗಲಿದೆ. ನಿಮ್ಮ ಭಾಗದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಆಸ್ತಿ ಮೌಲ್ಯಗಳು ಹೆಚ್ಚುತ್ತದೆ. ಮುಂದೆ ನಾವು ಎಲ್ಸಿಟಾ ಒಳಗೆ ಫ್ಲೈಓವರ್ ಮಾಡುವ ಅವಶ್ಯಕತೆ ಇದೆ. ಇಲ್ಲಿ ಸಂಜೆ ವೇಳೆ ಜನಸಂಖ್ಯೆ ಬ್ರಿಗೇಡ್ ರಸ್ತೆಗಿಂತ ಕಡಿಮೆ ಇರುವುದಿಲ್ಲ. ಲೋಕಸಭೆ ಚುನಾವಣೆ ಪ್ರಚಾರದ ವೇಳೆ ನಾನು ಇಲ್ಲಿನ ಪರಿಸ್ಥಿತಿ ನೋಡಿದ್ದೆ. ಎಲ್ಸಿಟಾ ಅವರೇ ಈ ಮೇಲ್ಸೇತುವೆ ಮಾಡಬೇಕು. ಮಾಡದಿದ್ದರೇ, ನಾವು ಇದನ್ನು ಪಾಲಿಕೆ ವ್ಯಾಪ್ತಿಗೆ ತೆಗೆದುಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತೇನೆ” ಎಂದು ಹೇಳಿದರು.

“ಬೆಂಗಳೂರು ನಗರದಲ್ಲಿ ಕೈಗಾರಿಕೆ ಉದ್ಯಮಗಳಿಂದ ಸಂಗ್ರಹವಾಗುತ್ತಿರುವ ತೆರಿಗೆ ಮಾದರಿಯಲ್ಲೇ ಅಷ್ಟೇ ಇಲ್ಲಿ ನೀಡಬೇಕು. ಮುಂದೆ ಇದರ ಬಗ್ಗೆ ದಿಟ್ಟ ತೀರ್ಮಾನ ಮಾಡುತ್ತೇನೆ. ಈ ಭಾಗದ ನಾಯಕರು ಸದನದಲ್ಲಿ ಈ ವಿಚಾರವಾಗಿ ಚರ್ಚೆ ಮಾಡಿದ್ದಾರೆ” ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com