
ಬೆಂಗಳೂರು: ಶ್ರಾವಣ ಮಾಸ ಆರಂಭವಾಗಿ ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ-ಸಡಗರ. ಸಹಜವಾಗಿ ಹಿಂದೂ ಧರ್ಮೀಯರ ಮನೆಗಳು, ದೇವಸ್ಥಾನಗಳಲ್ಲಿ ಇಂದು ಮುಂಜಾನೆಯಿಂದಲೇ ಹಬ್ಬದ ಕಳೆ ಕಟ್ಟಿದೆ.
ಹಬ್ಬಗಳೆಂದರೆ ಮಹಿಳೆಯರು-ಮಕ್ಕಳಿಗೆ ವಿಶೇಷವಾಗಿರುತ್ತದೆ. ಬೆಳಗ್ಗೆಯೇ ಮನೆ ಮುಂದೆ ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಬಾಗಿಲುಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ದೇವರ ಮನೆಯನ್ನು ಹೂವು-ಹಣ್ಣುಗಳಿಂದ ಅಲಂಕರಿಸುತ್ತಿದ್ದಾರೆ. ಸ್ನಾನ ಮಾಡಿ ಹಬ್ಬದ ಅಡುಗೆ ಮಾಡಿ ದೇವರಿಗೆ ನೈವೇಧ್ಯಕ್ಕೆ ತಯಾರಿ ನಡೆಯುತ್ತಿದೆ.
ದೇವಸ್ಥಾನಗಳಲ್ಲಿ ವಿಶೇಷವಾಗಿ ದೇವಿಯ ಮಂದಿರಗಳಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಲಲಿತಾ ಸಹಸ್ರನಾಮ, ಭಜನೆ, ಕುಂಕುಮಾರ್ಚನೆಗಳು ನೆರವೇರುತ್ತಿವೆ.
ಖರೀದಿ ಭರಾಟೆ, ಗಗನಕ್ಕೇರಿದ ಬೆಲೆ
ಬೆಂಗಳೂರು ಸೇರಿದಂತೆ ಬಹುತೇಕ ನಗರ ಪ್ರದೇಶಗಳಲ್ಲಿ ಮಾರುಕಟ್ಟೆಗಳತ್ತ ಜನಸಾಗರವೇ ಹರಿದು ಬರುತ್ತಿದ್ದು, ತರಕಾರಿ, ಹೂವು, ಹಣ್ಣು, ಪೂಜಾ ಸಾಮಾಗ್ರಿಗಳ ಬೆಲೆ ಹೆಚ್ಚಳ ಮಧ್ಯೆಯೂ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಕಳೆದ ವಾರಕ್ಕಿಂತ ಈ ವಾರ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ.
ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ಅಚ್ಚುಮೆಚ್ಚಿನ ಹಬ್ಭ. ಹೀಗಾಗಿ, ಹೂವು, ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಅಗತ್ಯ ವಸ್ತುಗಳು ಖರೀದಿಸಿದರು.
ಬೆಳಗ್ಗೆಯೇ ಹಬ್ಬಕ್ಕೆ ತಯಾರಿ
ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸುವ ಹಬ್ಬ ವರಮಹಾಲಕ್ಷ್ಮಿ, ಶ್ರಾವಣ ಮಾಸದ ಎರಡನೇ ಶುಕ್ರವಾರ ಆಡಿ ಶುಕ್ರವಾರದಂದು ಆಚರಿಸಲಾಗುತ್ತದೆ. ಹಾಗಾಗಿ ಧನಕನಕಾದಿ ಐಶ್ವರ್ಯಗಳನ್ನು ಕರುಣಿಸು ಎಂದು ಭಕ್ತರು ತಮ್ಮ ಮನೆಗಳಲ್ಲಿ ಇಷ್ಟಾನುಸಾರ, ಶಕ್ತಿಯಾನುಸಾರ ಪೂಜೆ ಮಾಡುತ್ತಾರೆ.
ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸಿ, ಕಲಶ ಇಟ್ಟು ವಸ್ತ್ರ, ಒಡವೆ, ಧನಕನಕಾದಿಗಳನ್ನಿಟ್ಟು, ಫಲವಸ್ತುಗಳು, ಅರಶಿನ ಕುಂಕುಮ, ನೈವೇದ್ಯಕ್ಕೆ ಹಣ್ಣು, ತರಕಾರಿ, ಬಗೆಬಗೆಯ ತಿನಿಸುಗಳನ್ನು ತಯಾರಿಸಿ ಮಹಾಲಕ್ಷ್ಮಿ ದೇವಿಯ ಮುಂದಿಟ್ಟು ಪೂಜಿಸುತ್ತಾರೆ. ಮಹಿಳೆಯರೇ ಮಾಡುವ ಹಬ್ಬ ಇದಾಗಿರುವುದರಿಂದ ಮಹಿಳೆಯರು ನಸುಕಿನಲ್ಲಿಯೇ ಎದ್ದು ಮನೆಯ ಮುಂದೆ ಸಾರಿಸಿ ರಂಗೋಲಿ ಬಳಿದು ಸ್ನಾನ ಮಾಡಿ ಬಂದು ಹೊಸ ಉಡುಗೆ ತೊಟ್ಟು ದೇವಿಗೆ ಮುಂದೆ ಕುಳಿತು ಸಂಕಲ್ಪ ಮಾಡಿ ವ್ರತ ಕೈಗೊಳ್ಳುತ್ತಾರೆ.
ನಂತರ ದೇವಿಗೆ ಬಗೆಬಗೆಯ ತಿನಿಸುಗಳನ್ನು ತಯಾರಿಸಿ ದೇವರ ಮುಂದಿಡುತ್ತಾರೆ. ಹಲವೆಡೆ ಸಾಯಂಕಾಲ ಶುಕ್ರವಾರ ವರಮಹಾಲಕ್ಷ್ಮಿಗೆ ಪೂಜೆ ಮಾಡುತ್ತಾರೆ. ಸಾಯಂಕಾಲ ಹೊತ್ತು ಮುತ್ತೈದೆಯರನ್ನು ಅರಶಿನ ಕುಂಕುಮಕ್ಕೆ ಕರೆಯುವುದು ಬಹುತೇಕ ಕಡೆ ವಾಡಿಕೆಯಿದೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಹಲವು ವಸ್ತುಗಳನ್ನು ಮಾರುಕಟ್ಟೆಯಿಂದ ತರಬೇಕಾಗುತ್ತದೆ. ವಸ್ತುಗಳನ್ನು ತಂದು ಒಪ್ಪ ಓರಣವಾಗಿ ಜೋಡಿಸಿಟ್ಟು ಹಬ್ಬಕ್ಕೆ ಅಡುಗೆ ಮಾಡುವುದೇ ಮುಖ್ಯವಾದ ಕೆಲಸ.
ವರಮಹಾಲಕ್ಷ್ಮಿ ಹಬ್ಬಕ್ಕೆ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ನಾಯಕರು, ಗಣ್ಯರು, ಸಿನಿಮಾ ಕಲಾವಿದರು ಶುಭ ಹಾರೈಸಿದ್ದಾರೆ.
Advertisement