ಮೆಟ್ರೋಗೆ ಶಂಕುಸ್ಥಾಪನೆ ಮಾಡಿದ್ದು ಮನಮೋಹನ್ ಸಿಂಗ್; ಬೆಂಗಳೂರಿನ ಮೂಲಕ 'ಬ್ರಾಂಡ್ ಭಾರತ' ಕಟ್ಟಬೇಕಿದೆ: ಡಿ.ಕೆ ಶಿವಕುಮಾರ್

ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೇರೆ ದೇಶಗಳ ಮೆಟ್ರೋ ರೈಲು ಯೋಜನೆಗಳ ಬಗ್ಗೆ ಅಧ್ಯಯನ ಮಾಡಿದ್ದೆ. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಅವರು ಸಲಹೆ ಮಾಡಿದ್ದರು ಎಂದು ತಿಳಿಸಿದರು.
DK Shivakumar
ಡಿ.ಕೆ. ಶಿವಕುಮಾರ್
Updated on

ಬೆಂಗಳೂರು: ಕೇಂದ್ರ ಸರ್ಕಾರ ನಮ್ಮ ಜೊತೆ ನಿಲ್ಲುವ ವಿಶ್ವಾಸವಿದೆ. ಏಕೆಂದರೆ ಪ್ರಧಾನಿಯವರು ಬೆಂಗಳೂರಿನ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನ ಮೂಲಕವೇ "ಬ್ರಾಂಡ್ ಭಾರತ"ವನ್ನು ಅವರು ಕಟ್ಟಬೇಕಿದೆ. ಈಗ ನಮಗೆ ಅವಕಾಶದ ಬಾಗಿಲು ತೆರೆದಿದೆ ಎನ್ನುವ ವಿಶ್ವಾಸ ಎಂದುಕೊಂಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಪ್ರಧಾನಿಯವರಿಗೆ ಬೆಂಗಳೂರಿನ ಮೂಲಸೌಕರ್ಯಗಳಿಗೆ ಅನುದಾನ ಕಲ್ಪಿಸುವ ಸಂಬಂಧ ತಾವು ಸಲ್ಲಿಸಿರುವ ಮನವಿಗೆ ಸ್ಪಂದಿಸುವ ವಿಶ್ವಾಸವಿದೆಯೇ ಎಂದು ಕೇಳಿದಾಗ ಡಿಸಿಎಂ ಅವರು ಹೀಗೆ ಉತ್ತರಿಸಿದರು. ಸಮಯಾವಕಾಶ ಕಡಿಮೆ ಇದ್ದ ಕಾರಣಕ್ಕೆ ಮನವಿ ಸಲ್ಲಿಸಲಾಯಿತು. ಸುಮಾರು 1.50 ಲಕ್ಷ ಕೋಟಿ ಅನುದಾನ ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಅವಶ್ಯವಿದೆ. ಆದ‌ ಕಾರಣಕ್ಕೆ ಸಮರ್ಪಕ ಅನುದಾನ ನೀಡಿ ಎಂದು ಮನವಿ ಮಾಡಿದ್ದೇನೆ" ಎಂದರು.

ತೆರಿಗೆ ಸಂಗ್ರಹದಲ್ಲಿ ಬೆಂಗಳೂರು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಪ್ರಪಂಚವು ಬೆಂಗಳೂರಿನ ಮೂಲಕ ದೇಶವನ್ನು ನೋಡುತ್ತಿದೆ‌. ಮೂರು ದಿನಗಳ ಹಿಂದೆ ಫಿಲಿಪೈನ್ಸ್ ಅಧ್ಯಕ್ಷರು ಬೆಂಗಳೂರಿಗೆ ಭೇಟಿ ನೀಡಿ, ಇಲ್ಲಿನ ಅನೇಕ ನಾಯಕರ ಜೊತೆ ಮಾತುಕತೆ ನಡೆಸಿದರು. ಇದು ಬೆಂಗಳೂರಿನ ಶಕ್ತಿ. ಈ ಕಾರಣಕ್ಕೆ ಈ ನಗರದ ಮತ್ತಷ್ಟು ಅಭಿವೃದ್ಧಿಗೆ ಅನುದಾನ ಬೇಕಿದೆ" ಎಂದರು.

ಮಾನ್ಯ ಪ್ರಧಾನಿಗಳಿಗೆ ಡಬಲ್ ಡೆಕ್ಕರ್ ಸೇರಿದಂತೆ ನಮ್ಮ ಅಭಿವೃದ್ಧಿ ಯೋಜನೆಗಳ ಮಾಡೆಲ್ ತೋರಿಸಿದ್ದೇನೆ. ಇದನ್ನು ನೋಡಿ ಅವರು ಸಂತಸಗೊಂಡರು ಎಂದರು. ಮೆಟ್ರೋ ಯೋಜನೆ ಕುರಿತಾಗಿ ಉಂಟಾಗಿರುವ 'ಕ್ರೆಡಿಟ್ ವಾರ್' ಬಗ್ಗೆ ಕೇಳಿದಾಗ, "ಮೆಟ್ರೋ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದು ಮನಮೋಹನ್ ಸಿಂಗ್ ಅವರು. ಆಗ ನಮ್ಮ ಸರ್ಕಾರವಿತ್ತು. ಈಗ ನಾವೇ ಅಧಿಕಾರಕ್ಕೆ ಬಂದು ಮುಂದುವರೆಸಿದ್ದೇವೆ. ಎಲೆಕ್ಟ್ರಾನಿಕ್ ಸಿಟಿ, ಏರ್ ಪೋರ್ಟ್, ತುಮಕೂರು ರಸ್ತೆ ಮೇಲ್ಸೇತುವೆ, ಯೋಜನೆ ಅನುಷ್ಠಾನಗೊಂಡಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕಾಲದಲ್ಲಿ. ಇದು ಕಾಂಗ್ರೆಸ್ ಪಕ್ಷದ ಶಕ್ತಿ" ಎಂದರು.

DK Shivakumar
ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಮಾಡಲು 1.5 ಲಕ್ಷ ಕೋಟಿ ರೂ ನೀಡಿ: ಪ್ರಧಾನಿಗೆ DCM ಡಿಕೆಶಿ ಮನವಿ

ಮೊದಲು ನಾವು ಬಿಜೆಪಿಯ ಇತಿಹಾಸವನ್ನು ಗಮನಿಸಬೇಕು. ಅವರು ಕೆಲಸ ಮಾಡುವುದಿಲ್ಲ, ಕೇವಲ ಹೆಸರು ಮಾತ್ರ ತೆಗೆದುಕೊಳ್ಳಲು ನೋಡುತ್ತಾರೆ. ಮೆಟ್ರೋ ಯೋಜನೆಯ ಭೂಸ್ವಾಧೀನ ಸೇರಿದಂತೆ ಇತರೇ ಕೆಲಸಗಳಿಗೆ ರಾಜ್ಯ ಸರ್ಕಾರ ಶೇ. 80 ರಿಂದ 83 ರಷ್ಟು ಹಣ ವೆಚ್ಚ ಮಾಡಿದೆ. ಕೇಂದ್ರ ಸರ್ಕಾರ ಶೇ. 20 ರಷ್ಟು ಮಾತ್ರ ಅನುದಾನ ನೀಡಿದೆ. ಯೋಜನೆಯ ಎಂ.ಡಿ. ಕರ್ನಾಟಕದವರು, ಅಧ್ಯಕ್ಷರು ಮಾತ್ರ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತಾರೆ. ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಅವರೇ ಸ್ವಂತವಾಗಿ ಮೆಟ್ರೋ ರೈಲು ಯೋಜನೆ ಅನುಷ್ಠಾನಗೊಳಿಸುತ್ತೇವೆ ಎಂದು ಘೋಷಿಸಿದ್ದಾರೆ. ನಾವು ಈ ಮೊದಲು ಮಾಡಿಕೊಂಡಿದ್ದ ಒಪ್ಪಂದದಂತೆ ಮುಂದುವರೆದಿದ್ದೇವೆ" ಎಂದರು.

"ನಾನು ಈ ಹಿಂದೆ ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೇರೆ ದೇಶಗಳ ಮೆಟ್ರೋ ರೈಲು ಯೋಜನೆಗಳ ಬಗ್ಗೆ ಅಧ್ಯಯನ ಮಾಡಿದ್ದೆ. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣ ಅವರು ಸಲಹೆ ಮಾಡಿದ್ದರು" ಎಂದು ತಿಳಿಸಿದರು. ನಾವು ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ, ರಾಜಕೀಯಕ್ಕಾಗಿ ಕೆಲಸ ಮಾಡುತ್ತಿಲ್ಲ. ಉದಾಹರಣೆಗೆ ಶಕ್ತಿ ಯೋಜನೆಯಡಿ ಕೇವಲ ಕಾಂಗ್ರೆಸ್ ಗೆ ಮತ ಹಾಕಿದ ಮಹಿಳೆಯರು ಮಾತ್ರ ಪ್ರಯಾಣ ಮಾಡುತ್ತಿಲ್ಲ. ಎಲ್ಲರೂ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಐದು ಗ್ಯಾರಂಟಿಗಳು ಸಮಾಜದ ಎಲ್ಲಾ ವರ್ಗದವರನ್ನು ತಲುಪಿವೆ. ಇದರಿಂದ ರಾಜ್ಯದ ಜಿಡಿಪಿ ಹಾಗೂ ಜೀವನ ಅತ್ಯುತ್ತಮ ಮಟ್ಟ ತಲುಪಿದೆ" ಎಂದರು. ಮುಂಗಾರು ಅಧಿವೇಶನದ ಬಗ್ಗೆ ಕೇಳಿದಾಗ, "ಬಿಜೆಪಿ ಹಾಗೂ ಪ್ರತಿಪಕ್ಷಗಳ ಎಲ್ಲಾ‌ ಸವಾಲು ಹಾಗೂ ಪ್ರಶ್ನೆಗಳಿಗೆ ಉತ್ತರಿಸಲು ಸನ್ನದ್ದರಾಗಿದ್ದೇವೆ" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com