
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ನಾಗರಹೊಳೆಯ ವೀರನಹೊಸಳ್ಳಿಯಿಂದ ಗಜಪಯಣದ ಮೂಲಕ ಆಗಮಿಸಿದ್ದ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಭಾನುವಾರ ಅರಮನೆ ಆವರಣದಲ್ಲಿ ವಿಧ್ಯುಕ್ತವಾಗಿ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆ.4ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ಗಜಪಡೆ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದವು. ಭಾನುವಾರ ಮಧ್ಯಾಹ್ನ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಣ್ಯ ಭವನದಿಂದ ಬೀಳ್ಕೊಡಲಾಯಿತು.
ಅಲ್ಲಿಂದ ಆನೆಗಳು ತುಂತುರು ಮಳೆಯ ನಡುವೆಯೇ ಮೆರವಣಿಗೆ ಮೂಲಕ ನಗರದ ಅಶೋಕ ವೃತ್ತ, ಆರ್‌ಟಿಒ ವೃತ್ತ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ ಹಾದು ಜಯಮಾರ್ತಾಂಡ ದ್ವಾರದ ಬಳಿ ಬಂದವು. ಆನೆಗಳು ಸಂಜೆ 6:50 ಕ್ಕೆ ಶುಭ ಮಕರ ಗೋಧೋಳಿ ಲಗ್ನದಲ್ಲಿ ಸ್ವಾಗತಿಸಲಾಯಿತು.
ದಸರಾ ಆನೆಗಳಾದ ಧನಂಜಯ, ಭೀಮ, ಮಹೇಂದ್ರ, ಕಾವೇರಿ, ಕಾಂಜನ್, ಪ್ರಶಾಂತ್, ಲಕ್ಷ್ಮಿ ಮತ್ತು ಏಕಲವ್ಯ ಕಳೆದ ಸೋಮವಾರ ಹುಣಸೂರಿನ ವೀರನಹೊಸಹಳ್ಳಿಯಿಂದ ನಗರಕ್ಕೆ ಆಗಮಿಸಿ ಅರಣ್ಯ ಭವನದಲ್ಲಿ ತಂಗಿದ್ದವು.
Advertisement