
ಬೆಂಗಳೂರು: ಭಾರತದ ಹೈಸ್ಪೀಡ್ ರೈಲು ಜಾಲಕ್ಕೆ ಉತ್ತೇಜನ ನೀಡುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಿಂದ ಮೂರು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ಬಹು ನಿರೀಕ್ಷಿತ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಪ್ರಧಾನಿ ಭೌತಿಕವಾಗಿ ಹಸಿರು ನಿಶಾನೆ ತೋರಿದರ. ಇದರ ಜೊತೆಗೆ ಶ್ರೀ ಮಾತಾ ವೈಷ್ಣೋ ದೇವಿ ಕತ್ರ-ಅಮೃತಸರ ಮತ್ತು ಅಜ್ನಿ (ನಾಗ್ಪುರ)-ಪುಣೆ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಿದರು. ಧ್ವಜಾರೋಹಣ ಮಾಡುವ ಮೊದಲು ಪ್ರಧಾನಿ ರೈಲಿನೊಳಗೆ ಪ್ರವಾಸ ಕೈಗೊಂಡರು. ಬೆಂಗಳೂರು-ಬೆಳಗಾವಿ ರೈಲಿನಲ್ಲಿದ್ದ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು, ಖುಷಿಯ ಕ್ಷಣಗಳನ್ನು ಹಂಚಿಕೊಂಡರು. ದೊಡ್ಡ ಕನಸು ಕಾಣಲು ಅವರನ್ನು ಪ್ರೋತ್ಸಾಹಿಸಿದರು.
ನಂತರ ಲೋಕೋ ಪೈಲಟ್‌ಗಳನ್ನು ಸಹ ಪ್ರಧಾನಿ ಭೇಟಿಯಾದರು, ದೇಶದ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಶ್ಲಾಘಿಸಿದರು. ಬೆಂಗಳೂರು-ಬೆಳಗಾವಿ ನಡುವಣ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 611 ಕಿ.ಮೀ. ದೂರವನ್ನು ಕೇವಲ 8.5 ಗಂಟೆಗಳಲ್ಲಿ ಕ್ರಮಿಸಲಿದೆ. ಆ ಮೂಲಕ ಈ ಮಾರ್ಗದಲ್ಲಿ ಸಂಚರಿಸುವ ಅತಿ ವೇಗದ ರೈಲು ಎನಿಸಿಕೊಳ್ಳಲಿದೆ. ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣದ ಸಮಯವನ್ನು ಸುಮಾರು 1 ಗಂಟೆ 20 ನಿಮಿಷಗಳು ಕಡಿಮೆ ಮಾಡುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ 1 ಗಂಟೆ 40 ನಿಮಿಷಗಳಷ್ಟು ಪ್ರಯಾಣ ಕಡಿಮೆ ಮಾಡುತ್ತದೆ.
ಈ ಹೊಸ ರೈಲು ಸೇರ್ಪಡೆಯೊಂದಿಗೆ ಕರ್ನಾಟಕವು ಈಗ 11 ವಂದೇ ಭಾರತ್ ಸೇವೆಗಳನ್ನು ನಿರ್ವಹಿಸುತ್ತಿದೆ. ಹೊಸ ಬೆಂಗಳೂರು-ಬೆಳಗಾವಿ ರೈಲು ಯಶವಂತಪುರ, ತುಮಕೂರು, ದಾವಣಗೆರೆ, ಹಾವೇರಿ ಮತ್ತು ಹುಬ್ಬಳ್ಳಿ ಮೂಲಕ ಸಂಚರಿಸಲಿದೆ.
Advertisement