
ಬೆಂಗಳೂರು: ಬೆಂಗಳೂರಿನಲ್ಲಿ ನಾಯಿ ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೀದಿ ನಾಯಿ ದಾಳಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ನಗರ ಕ್ಯಾಂಪಸ್ ನ ನಾಗರಭಾವಿ ಬಳಿ ಈ ಘಟನೆ ಸಂಭವಿಸಿದೆ. ಈ ಇಬ್ಬರು ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ವಿದ್ಯಾರ್ಥಿನಿಯರು ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ವಿವಿಯಲ್ಲಿ 3ನೇ ಸೆಮಿಸ್ಟೆರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ತೆಲಂಗಾಣ ಮತ್ತು ಹಾವೇರಿ ಮೂಲದ ವಿದ್ಯಾರ್ಥಿನಿಯರು ತರಗತಿಗೆ ನಡೆದು ಹೋಗುತ್ತಿದ್ದಾಗ ಬೀದಿನಾಯಿಯೊಂದು ಅವರ ಮೇಲೆ ದಾಳಿ ನಡೆಸಿದೆ. ವಿದ್ಯಾರ್ಥಿನಿಯರಾದ ಸೌಜನ್ಯ, ನಿಶ್ಚಿತಾ ಎಂಬುವವರ ಮೇಲೆ ಬೀದಿನಾಯಿಯೊಂದು ಎರಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement